ತುಬಚಿ-ಬಬಲೇಶ್ವರ ಜಾಕವೆಲ್‌ನಿಂದ ನೀರು ಬಿಡುಗಡೆಗೆ ಅಡ್ಡಿ: ಕ್ರಮಕ್ಕೆ ಆಗ್ರಹ

Obstruction in release of water from Tubachi-Babaleshwar jackwell: Demand for action

ತುಬಚಿ-ಬಬಲೇಶ್ವರ ಜಾಕವೆಲ್‌ನಿಂದ ನೀರು ಬಿಡುಗಡೆಗೆ ಅಡ್ಡಿ: ಕ್ರಮಕ್ಕೆ ಆಗ್ರಹ  

ವಿಜಯಪುರ 24: ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆಯ ಮೂಲಕ ತಿಕೋಟಾ ಭಾಗಕ್ಕೆ ನೀರು ಪೂರೈಸಬೇಕು, ಜಾಕವಲ್ ನಿಂದ ನೀರು ಹರಿಸಲು ಪದೇ ಪದೇ ಅಡ್ಡಪಡಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಉಪವಾಸ ಸತ್ಯಗ್ರಹ ಸೇರಿದಂತೆ ಉಗ್ರ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.  

ಇಂದು ತಿಕೋಟಾ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಬೃಹತ್ ಪ್ರತಿಭಟನೆ ನಡೆಸಿದ ರೈತರು ತುಬಚಿ-ಬಬಲೇಶ್ವರ ಜಾಕವೆಲ್ ನಿಂದ ನೀರು ಬಿಡುಗಡೆಗೆ ಅಡ್ಡಿಪಡಿಸಿದ ರೈತರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.   

ರೈತ ಮುಖಂಡ ಯಾಕೂಬ್ ಜತ್ತಿ ಮಾತನಾಡಿ ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆಯಲ್ಲಿ ನಮಗೆ ಹಂಚಿಕೆಯಾದ ನಮ್ಮ ಪಾಲಿನ ಹಕ್ಕನ್ನು ಕೇಳುತ್ತಿದ್ದೇವೆ ಹೊರತು ಭಿಕ್ಷೆಯನ್ನು ಬೇಡುತ್ತಿಲ್ಲ. ಆದರೆ, ಜಮಖಂಡಿ ತಾಲೂಕಿನ ಕೆಲವು ದುಷ್ಟಶಕ್ತಿಗಳು ಈ ಭಾಗಕ್ಕೆ ನೀರು ಹರಿಸದಂತೆ ವ್ಯವಸ್ಥಿತ ಪಿತೂರಿ ಮಾಡುತ್ತಿದ್ದಾರೆ. ಇಂಥ ದುಷ್ಟ ಶಕ್ತಿಗಳು ಜಮಖಂಡಿ, ಅಥಣಿ ಹಾಗೂ ತಿಕೋಟಾ ತಾಲೂಕಿನ ಕೆಲವು ಗ್ರಾಮಗಳಿಗೆ ಹರಿಯಬೇಕಿರುವ ನೀರನ್ನು ವ್ಯವಸ್ಥಿತ ಪಿತೂರಿ ನಡೆಸಿ ತಡೆಯುತ್ತಿವೆ ಎಂದು ಅವರು ತಿಳಿಸಿದರು.  

ಈ ಹಿಂದೆ ಪಡಸಲಗಿ ಹತ್ತಿರ ನಿರ್ಮಿಸಿದ ಕೆರೆ ತುಂಬುವ ಯೋಜನೆಗೂ ಕೂಡ ಈ ರೀತಿ ಅಡ್ಡಿ ಪಡಿಸಿ, ಇಡೀ ಯೋಜನೆಯನ್ನೇ ವಿಫಲಗೊಳಿಸಿದ ಜನರೇ ಇಂದು ಮತ್ತೆ ತುಬಚಿ-ಬಬಲೇಶ್ವರ ಯೋಜನೆಗೆ ಅಡ್ಡಿಪಡಿಸುತ್ತಿದ್ದಾರೆ. ನದಿಯಲ್ಲಿ ಹರಿಯುವ ಎಲ್ಲ ನೀರು, ನದಿ ಪಾತ್ರದ ಜನರಿಗೆ ಮಾತ್ರ ಎಂದು ಇವರು ಭಾವಿಸಿದಂತಿದೆ. ಈ ಹಿಂದೆ ಕಾನೂನು ಬಾಹಿರವಾಗಿ ಚಿಕ್ಕಪಡಸಲಗಿ ಬ್ಯಾರೆಜಿಗೆ ಕಾನೂನು ಬಾಹಿರವಾಗಿ ಆಲಮಟ್ಟಿ ಹಿನ್ನೀರನ್ನು ರಿವರ್ಸ್‌ ಪಂಪ್ ಮೂಲಕ ಎತ್ತಿ ಬಳಸಿದ್ದಲ್ಲದೇ, ಈ ಯೋಜನೆಗೆ ಸರಕಾರದ ಅನುದಾನ ಪಡೆದಿದ್ದಾರೆ. ಇಂಥವರ ವಿರುದ್ಧ ಉಗ್ರ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆ ನೀಡಬೇಕು ಎಂದು ಅವರು ಹೇಳಿದರು.  

ಜಿ.ಪಂ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ ಮಾತನಾಡಿ, ಎಂ.ಬಿ.ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಈ ಭಾಗದ ರೈತರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮ ವಹಿಸಿ ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಒದಗಿಸಿದ್ದಾರೆ. ಯಾವುದೇ ತಾರಮತ್ಯ ಮಾಡದೇ ಸಂಕಷ್ಟದ ಸಮಯದಲ್ಲಿ ಉಭಯ ಜಿಲ್ಲೆಗಳ ರೈತರಿಗೆ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಂಡಿದ್ದಾರೆ. ಆದರೂ, ಚಿಕ್ಕಪಡಸಲಗಿ ಭಾಗದ ರೈತರು ತಿಕೋಟಾ ತಾಲೂಕಿನ ಅನ್ನದಾತರ ಸಂಕಷ್ಟ ಅರ್ಥಮಾಡಿಕೊಳ್ಳದೆ ನೀರು ಬಿಡುಗಡೆಗೆ ಅಡ್ಡಿಯಾಗಿದ್ದಾರೆ ಎಂದು ಕಿಡಿ ಕಾರಿದರು.  

ತಿಕೋಟಾ ರೈತ ಗೂಳಪ್ಪ ಪೂಜಾರಿ ಮಾತನಾಡಿ, ಕಳೆದ ವರ್ಷ ಜೂನ್ ಮತ್ತು ಜುಲೈನಲ್ಲಿ ಕೇವಲ ಒಂದು ವಾರ ಮಾತ್ರ ನಮಗೆ ನೀರು ಸಿಕ್ಕಿದೆ. ಉಳಿದ ಎಲ್ಲ ತಿಂಗಳ ನೀರನ್ನು ನೀವೇ ಉಳಿಸಿಕೊಂಡಿದ್ದೀರಿ. ನಮ್ಮ ಭಾಗದಲ್ಲಿ ದ್ರಾಕ್ಷಿ ಸೇರಿದಂತೆ ಬಹುತೇಕ ಎಲ್ಲ ಬೆಳೆಗಳು ಒಣಗುತ್ತಿವೆ. 12 ತಿಂಗಳು ನೀವೇ ನೀರು ಬಳಸಿಕೊಂಡರೂ ನಿಮಗೆ ತೃಪ್ತಿ ಇಲ್ಲ. ನಾವು ಕೇವಲ ಒಂದು ವಾರ ಮಾತ್ರ ನೀರು ಕೇಳುತ್ತಿದ್ದೇವೆ. ಅಧಿಕಾರಿಗಳು ಎರಡು ದಿನಗಳಲ್ಲಿ ನಮಗೆ ನೀರು ಹರಿಸದಿದ್ದರೆ ರಸ್ತೆ ತಡೆ ಸೇರಿದಂತೆ, ಜಾಕವೆಲ್ ಗೆ ತೆರಳಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.   

ಲೋಹಗಾಂವ ರೈತ ಬಿ.ಎಸ್‌.ಗಸ್ತಿ ಮಾತನಾಡಿ, ಚಿಕ್ಕಪಡಸಲಗಿ ಭಾಗದ ರೈತರು ನಮ್ಮ ಪಾಲಿನ ನೀರಿಗೆ ತಾವೇ ಮಾಲಿಕರೆಂಬಂತೆ ವರ್ತಿಸುತ್ತಿದ್ದಾರೆ. ನಮ್ಮ ನೀರು ನಮ್ಮ ಹಕ್ಕು, ನಮ್ಮ ಪಾಲಿನ ನೀರು ನಮಗೆ ಬೇಕು. ರೈತರೆಲ್ಲರೂ ಒಂದೇ ಜಾತಿ. ನಮ್ಮ ನೀರನ್ನು ತಡೆದಿರುವ ರೈತರನ್ನು ಏನೆಂದು ಕರೆಯಬೇಕು. ಎಂ.ಬಿ.ಪಾಟೀಲರು ದೇವರ ರೂಪದಲ್ಲಿ ಬಂದು ನಮ್ಮೇಲ್ಲರಿಗೂ ನೀರಾವರಿ ಮಾಡಿದ್ದಾರೆ. ಆದರೆ, ದೇವರೂ ಕೊಟ್ಟರೂ, ಪೂಜಾರಿ ಕೊಡಲಿಲ್ಲ ಎಂಬ ನಾಣ್ಣುಡಿಯಂತೆ ವರ್ತಿಸುತ್ತಿರುವ ನಿಮ್ಮ ಧೋರಣೆ ಸರಿಯಲ್ಲ. ರೈತರ ವಿರುದ್ಧ ರೈತರೇ ಹೋರಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಿದ್ದು ವಿಪರ್ಯಾಸವೇ ಸರಿ ಎಂದು ವಿಷಾದ ವ್ಯಕ್ತಪಡಿಸಿದರು.  

ತಿಕೋಟಾ ತಾ. ಪಂ ಮಾಜಿ ಅಧ್ಯಕ್ಷೆ ಪ್ರಭಾವತಿ ನಾಟಿಕಾರ ಮಾತನಾಡಿ, ಇರುವುದನ್ನು ಹಂಚಿಕೊಂಡು ತಿನ್ನುವುದು ರೈತರ ಜಾಯಮಾನ. ಆದರೆ, ಈ ಮಾತನ್ನು ಆ ಭಾಗದ ರೈತರು ಸುಳ್ಳು ಮಾಡುತ್ತಿದ್ದಾರೆ. ರೈತರು ಮತ್ತು ಜನ ಜಾನುವಾರುಗಳ ಸಮಸ್ಯೆಯನ್ನು ಅಲ್ಲಿನ ರೈತರು ಅರಿತುಕೊಂಡು ನಮ್ಮ ಪಾಲಿನ ನೀರು ಬಿಡಬೇಕು. ಇಲ್ಲದಿದ್ದರೆ, ರೈತರ ವಿರುದ್ಧ ರೈತರೇ ಹೋರಾಟಕ್ಕೆ ಇಳಿಯುವ ಕೆಟ್ಟ ಇತಿಹಾಸಕ್ಕೆ ಸಾಕ್ಷಿಯಾಗಬೇಕಾಗುತ್ತದೆ. ಅಲ್ಲದೇ, ನಾವು ರೈತ ಮಹಿಳೆಯರೂ ಕೂಡ ಜಾಕವೆಲ್ ಬಳಿಗೆ ಬಂದು ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.   

ಬಾಬಾನಗರ ರೈತ ಸಿದಗೊಂಡ ರುದ್ರಗೌಡರ ಮಾತನಾಡಿ, ಚಿಕ್ಕಪಡಸಲಗಿ ಭಾಗದ ಕೃತ್ಯ ದುರುದ್ದೇಶದಿಂದ ಕೂಡಿದೆ. ಕಳೆದ ಒಂದು ವರ್ಷದಿಂದ ಮೇಲಿಂದ ಮೇಲೆ ನೀರು ಹರಿಯಲು ಅಡ್ಡಿ ಪಡಿಸಲಾಗುತ್ತಿದೆ. ನಾವೇಲ್ಲರೂ ಸಹೋದರರಿದ್ದಂತೆ. ನಮಗೂ ತಕ್ಕ ಉತ್ತರ ನೀಡಲು ಬರುತ್ತದೆ. ದುಷ್ಟ ಶಕ್ತಿಗಳ ಪ್ರೇರಣೆಗೆ ಒಳಗಾಗಬೇಡಿ. ನಮ್ಮ ಪಾಲಿನ ನೀರನ್ನು ನಮಗೆ ಹರಿಸಿ ಎಂದು ಹೇಳಿದರು.   

ಸ್ಥಳಕ್ಕೆ ಆಗಮಿಸಿದ ತಿಕೋಟಾ ತಹಸೀಲ್ದಾರ ಸುರೇಶ ಚವಲರ ಅವರಿಗೆ ರೈತ ಮುಖಂಡರು ಮನವಿ ಪತ್ರ ನೀಡಿದರು.   

ರೈತ ಮುಖಂಡರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಶಂಕರಗೌಡ ಬಿರಾದರ, ಸುರೇಶ ಬಾಬಾನಗರ, ಗುರು ಮಾಳಿ, ಕೆ. ಆರ್‌. ಮೆಡೆಗಾರ, ಇಮ್ತಿಯಾಜ್ ಮುಲ್ಲಾ, ಮಲ್ಲಿಕಾರ್ಜುನ ಲೋಣಿ, ಈರಣ್ಣಗೌಡ ರುದ್ರಗೌಡ, ಜಗದೀಶಗೌಡ ಪಾಟೀಲ, ವಿಜುಗೌಡ ಪಾಟೀಲ, ಭೀಮು ನಾಟೀಕಾರ, ಆರ್‌. ಜಿ. ಯರನಾಳ, ಜಕ್ಕಪ್ಪ ಎಡವೆ, ರಾಮಜಿ ಮಿಸಾಳೆ, ಪ್ರಶಾಂತ ಜಂಡೆ, ಶಾಸಪ್ಪ ಹಂಚನಾಳ, ಕಾಶಿನಾಥಗೌಡ ಪಾಟೀಲ, ಲೇಪು ಕೊಣ್ಣೂರ, ಭಾಗೀರಥಿ ತೇಲಿ, ಕಸ್ತೂರಿ ಬಿರಾದಾರ, ರಮೇಶ ಜಂಬಗಿ, ಹಾಜಿಲಾಲ ಕೊಟ್ಟಲಗಿ, ಸಿದ್ದಾರ್ಥ ಪರನಾಕರ, ಬಾಳಪ್ಪ ಪೂಜಾರಿ, ರಾಜಕುಮಾರ ಚಾವರ, ಶ್ರೀಮಂತ ಬನ್ನೆನವರ, ಶಿವು ಪರೀಟ, ಯಮನಪ್ಪ ಮಲಕನವರ, ಪರಮೇಶ ಕಲಬಿಳಗಿ, ಮಮ್ಮು ಮುಜಾವರ ಮುಂತಾದವರು ಉಪಸ್ಥಿತರಿದ್ದರು.