ಸಿಂದಗಿ 281: ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿ ರೈತರಿಗೆ ಗೌರವ ಕೊಡಬೇಕು. ರೈತರ ಬಗ್ಗೆ ಕೀಳು ದೃಷ್ಠಿಕೋನ ಸಲ್ಲದು. ರೈತರಿಂದ ನಮ್ಮ ಬದುಕು ಎಂಬ ಗೌರವ ಭಾವನೆ ಹೊಂದಬೇಕು ಎಂದು ಕೃಷಿ ವಿಜ್ಞಾನಿ ಮೈಸೂರಿನ ಡಾ.ಎಸ್. ಅಯ್ಯಪ್ಪನ್ ಮನವಿ ಮಾಡಿದರು.
ಪಟ್ಟಣದ ಸಾರಂಗಮಠದಲ್ಲಿ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ನಮ್ಮ ದೇಶದಲ್ಲಿ ಆಹಾರ ಸುರಕ್ಷತೆ ಇದೆ ಎಂಬ ವಿಶ್ವಾಸದಿಂದಲೇ ದೇಶದಲ್ಲಿ ಅಗಾಧ ಸಾಧನೆ ಸಾಧ್ಯವಾಗಿದೆ. ಪ್ರತಿಯೊಂದು ಸಾಧನೆಗೆ ಕೃಷಿದೇವರು ಮುಖ್ಯ ಎಂದರು.
ಮುಂಬರುವ ದಿನಗಳಲ್ಲಿ ಚಿನ್ನಕ್ಕಿಂತ ಅನ್ನ ಮುಖ್ಯ ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ.ಥಾಯ್ಲೆಂಡ್, ಮಲೇಶಿಯಾ, ಇಂಡೋನೇಶಿಯಾದಂಥ ರಾಷ್ಟ್ರಗಳು ಬೇರೆ ದೇಶಗಳಿಗೆ ಏನೆಲ್ಲ ಕಳಿಸಿದರೂ ಒಂದು ಟನ್ ಆಹಾರ ಹೊರಗೆ ಕಳುಹಿಸುವುದಿಲ್ಲ. ನಮ್ಮ ದೇಶದಲ್ಲಿ ಪ್ರತಿ ವರ್ಷ 100 ಕೋಟಿ ಟನ್ ಆಹಾರ ಉತ್ಪಾದನೆಯಾಗುತ್ತದೆ. ಅದರಲ್ಲೂ ಕರ್ನಾಟಕದಲ್ಲಿ 170 ಲಕ್ಷ ಟನ್ ಆಹಾರ ಉತ್ಪಾದನೆಯಾಗುತ್ತದೆ. ಆಹಾರವನ್ನು ಹಾಳು ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂದು ಕೇಳಿಕೊಂಡರು.
ರೈತರು ಸಂವರ್ಧನೆ ಜೊತೆಗೆ ಸಂಸ್ಕರಣೆಗೂ ಮುಂದಾಗಬೇಕು. ಜೊತೆಗೆ ಕಲಿಕೆ, ಉಳಿಕೆ ಹಾಗೆ ಗಳಿಕೆಯನ್ನೂ ಕೂಡ ಹೊಂದಬೇಕು. ರೈತರರಲ್ಲಿ ದೂರದೃಷ್ಠಿ, ಆವಿಷ್ಕಾರ ಹಾಗೂ ಸಹಭಾಗಿತ್ವ ಮೂಡಿ ಬಂದರೆ ನಮ್ಮ ದೇಶ ಯಾವ ದೇಶಕ್ಕಿಂತ ಕಡಿಮೆ ಇರುವುದಿಲ್ಲ ಎಂದು ಸಲಹೆ ನೀಡಿದರು.
ಕೃಷಿ ವಿಶ್ವ ವಿದ್ಯಾಲಯಗಳು ಅನ್ನ ದೇಗುಲಗಳು. ಕೃಷಿ ಬಗ್ಗೆ ರೈತರ ಬಗ್ಗೆ ಮಾಧ್ಯಮಗಳು ಹೆಚ್ಚಿನ ಒಲುವು ತೋರಿಸುವುದು ತೀರ ಅಗತ್ಯವಾಗಿದೆ ಎಂದು ತಿಳಿಸಿದರು.
ಕೊಡಗು ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿ ಡಾ.ಅಶೋಕ ಆಲೂರು ಮಾತನಾಡಿ, ಕೃಷಿ ಸಂತ ಡಾ. ಎಸ್.ಅಯ್ಯಪ್ಪನ್ ಕೃಷಿ ವಿಜ್ಞಾನದ ಮೂಲಕ ಸತತ ಆವಿಷ್ಕಾರ, ಕ್ರಾಂತಿ ಮತ್ತು ಸಂಶೋಧನೆಗೆ ಅಪಾರ ಶ್ರಮವಹಿಸಿದ ನಿರಂಬಳ ವಿಜ್ಞಾನಿ ಎಂದು ಗುಣಗಾನ ಮಾಡಿದರು.
ಡಾ.ಎಸ್. ಅಯ್ಯಪ್ಪನ್ ಅವರು ವರ್ಷದ 365 ದಿನಗಳಲ್ಲಿ ಕೇವಲ ಅರ್ಧ ದಿನ ರಜೆ ಪಡೆಯುತ್ತಿದ್ದ ಮಹಾನ್ ಕಾಯಕನಿಷ್ಠರಾಗಿದ್ದಾರೆ ಎಂದು ಉಮಾ ಅಯ್ಯಪ್ಪನ್ ಮಾತನಾಡಿದರು.
ಸಾರಂಗಮಠದ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಅವರು 1 ಲಕ್ಷ ರೂ. ಮೊತ್ತದ ಚೆಕ್ ಜೊತೆಗೆ ರಜತ ಪ್ರಶಸ್ತಿ ಫಲಕ ನೀಡಿ ಡಾ.ಎಸ್.ಅಯ್ಯಪ್ಪನ್ ಅವರಿಗೆ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದರು.
ವಿಜಯಪುರ ಕೃಷಿ ಮಹಾವಿದ್ಯಾಲಯದ ವಿದ್ಯಾಧಿಕಾರಿ ಡಾ.ಭೀಮಪ್ಪ ಮಾತನಾಡಿದರು. ಡಾ.ರ.ವಿ. ಗೋಲಾ, ಡಾ.ಶರಣಬಸವ ಜೋಗೂರ, ಪೂಜಾ ಹಿರೇಮಠ ಮಾತನಾಡಿದರು.
ಪ್ರತಿ ವರ್ಷ ಪ್ರಶಸ್ತಿ ಮೊತ್ತ 1 ಲಕ್ಷ ರೂ. ನೀಡುವ ನವದೆಹಲಿಯ ಪೂಜಾ ಹಾಗೂ ಈರಣ್ಣ ರುಕುಂಪೂರ ಅವರ ಕುಟುಂಬದ ಸದಸ್ಯರನ್ನು ಗೌರವಿಸಿದರು.
ಕೊಣ್ಣುರ ಶ್ರೀಗಳು, ಕನ್ನೊಳ್ಳಿ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಶಾಸಕ ಅಶೋಕ ಮನಗೂಳಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ರಮೇಶ ಭೂಸನೂರ, ಅರುಣ ಶಹಾಪೂರ, ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರು, ಕೃಷಿ ಸಂಶೋದಕರು ಇದ್ದರು.