ಲೋಕದರ್ಶನ ವರದಿ
ಸಿದ್ದಾಪುರ: ಸ್ಥಳೀಯ ಪಪಂ ಕಚೇರಿಯಲ್ಲಿ ಮಳೆಗಾಲದ ಪೂರ್ವ ಸಿದ್ದತೆ, ಕುಡಿಯುವ ನೀರಿನ ಕುರಿತು ಮುಖ್ಯಾಧಿಕಾರಿ ಸತೀಶಗುಡ್ಡೆ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಪಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದ್ದು ಅವಶ್ಯ ಇದ್ದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ಎಲ್ಲ ವಿಭಾಗದ ಅಧಿಕಾರಿಗಳು ಗಮನ ನೀಡಬೇಕು. ಮುಖ್ಯವಾಗಿ ಪಟ್ಟಣ ವ್ಯಾಪ್ತಿಯರಸ್ತೆ ಮತ್ತು ಗಟಾರ-ಚರಂಡಿಗಳಲ್ಲಿ ನೀರು ನಿಲ್ಲದಂತೆ ಸ್ವಚ್ಛತೆಗೊಳಿಸಲು ಕ್ರಮಕೈಗೊಳ್ಳಬೇಕು.
ಮುಖ್ಯವಾಗಿ ಪಪಂ ಆರೋಗ್ಯ ಸಹಾಯಕರು ಹೆಚ್ಚು ಗಮನ ನೀಡಬೇಕು.ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಪಂ ವ್ಯಾಪ್ತಿಯಲ್ಲಿ ಏನೇ ಅವಗಡಗಳು ಸಂಭವಿಸಿದಾಗ ತಕ್ಷಣ ಮಾಹಿತಿ ನೀಡುವಂತೆ ಮುಖ್ಯಾಧಿಕಾರಿ ಸತೀಶಗುಡ್ಡೆ ಅಧಿಕಾರಿಗಳಿಗೆ ಸೂಚಿಸಿದರು.
ಪಪಂ ಇಂಜಿನಿಯರ್ ರಮೇಶ ನಾಯ್ಕ ಮಾತನಾಡಿ ರಸ್ತೆ, ಗಟಾರ್-ಚರಂಡಿಗಳನ್ನು ಸ್ವಚ್ಛಗೊಳಿಸುವುದಕ್ಕೆ ಕ್ರಿಯಾಯೋಜನೆ ತಯಾರಿಲಾಗುತ್ತಿದೆ. ಜಂಗಲ್ ಕಟಿಂಗ್ ನಡೆಸುವಂತೆ ಹೆಸ್ಕಾಂ ಇಲಾಖೆಗೆ ಹಾಗೂ ಅಪಾಯದಲ್ಲಿರುವ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ, ಸೊಳ್ಳೆಗಳ ನಿಯಂತ್ರಣದ ಕುರಿತು ಅರೋಗ್ಯ ಸಹಾಯಕರು ಹೆಚ್ಚು ಗಮನ ನೀಡಬೇಕೆಂದು ಹೇಳಿದರು. ಸಭೆಯಲ್ಲಿ ಪಪಂಅಧಿಕಾರಿಗಳು ಹಾಗೂ ಸಿಬ್ಬಂದಿಗಳಿದ್ದರು.