ಬ್ಯಾಂಕು ಸದಾ ಶ್ರಮಿಸಲಿ, ಉತ್ತಮ ಆರ್ಥಿಕ ಸೇವೆ ನೀಡಿ ಬಡವರಿಗೆ ಆರ್ಥಿಕ ಚೈತನ್ಯ ತುಂಬಲಿ-ಸ್ವಾಮೀಜಿ
ವಿಜಯಪುರ 16: ಸಹಕಾರ ವಲಯದ ಪ್ರತಿಷ್ಠಿತ ಸಹಕಾರಿ ಬ್ಯಾಂಕ ಆಗಿರುವ ಮಹಾಲಕ್ಷ್ಮೀ ಸಹಕಾರಿ ಬ್ಯಾಂಕ್ ಕಾರ್ಯಾಲಯಕ್ಕೆ ಶೃಂಗೇರಿ ಶಾರದಾ ಪೀಠದ ಜಗದ್ಗುರು ವಿಧು ಶೇಖರ ಭಾರತೀ ಸ್ವಾಮೀಜಿ ಅವರು ಭೇಟಿ ನೀಡಿ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅನುಗ್ರಹ ಪೂರ್ವಕ ಆಶೀರ್ವಾದ ಮಾಡಿದರು. ಬಡವರ ಕಲ್ಯಾಣಕ್ಕೆ ಈ ಬ್ಯಾಂಕು ಸದಾ ಶ್ರಮಿಸಲಿ, ಉತ್ತಮ ಆರ್ಥಿಕ ಸೇವೆ ನೀಡಿ ಬಡವರಿಗೆ ಆರ್ಥಿಕ ಚೈತನ್ಯ ತುಂಬಲಿ, ಹೀಗೆ ಬ್ಯಾಂಕು ಉತ್ತರೋತ್ತರವಾಗಿ ಬೆಳೆಯಲಿ ಎಂದು ಅನುಗ್ರಹ ಸಂದೇಶ ನೀಡಿದರು. ಈ ವೇಳೆ ಮಹಾಲಕ್ಷ್ಮಿ ಬ್ಯಾಂಕ್ ಅಧ್ಯಕ್ಷ ಮುಕುಂದ ಕುಲಕರ್ಣಿ ವಿವರಣೆ ನೀಡಿ, ಮಹಾಲಕ್ಷ್ಮಿ ಸಹಕಾರ ಬ್ಯಾಂಕ್ ಕಳೆದ ಹಲವಾರು ದಶಕಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿದ್ದು ದಿ.ಶ್ರೀನಿವಾಸರಾವ ಸ್ವಾಮೀರಾವ ದೇಶಪಾಂಡೆ ಅವರು 1930 ರಲ್ಲಿ ಈ ಬ್ಯಾಂಕ್ ಸ್ಥಾಪಿಸಿದ್ದು, ಶತಮಾನೋತ್ಸವದ ಹೊಸ್ತಿಲಲ್ಲಿದೆ ಎಂದು ಬ್ಯಾಂಕ ಗ್ರಾಹಕರಿಗೆ ಕಲ್ಪಿಸಿರುವ ಸೌಲಭ್ಯಗಳ ಬಗ್ಗೆ ವಿವರಿಸಿದರು. ಉಪಾಧ್ಯಕ್ಷ ವಿಕಾಸ್ ಪದಕಿ, ನಿರ್ದೇಶಕರಾದ ವಿಜಯ ಜೋಶಿ, ಕೃಷ್ಣ ಗುನ್ನಾಳಕರ, ಗೋವಿಂದ ಜೋಶಿ, ಶಂಕರ್ ರಾವ್ ಕುಲಕರ್ಣಿ, ಸಚಿನ್ ಮದ್ದಿನಮಠ, ಪವನ್ ಕುಲಕರ್ಣಿ, ಬಸವರಾಜ್ ಪತ್ತಾರ್, ವೃತ್ತಿಪರ ನಿರ್ದೇಶಕ ಸಮೀರ್ ಕುಲಕರ್ಣಿ, ಬ್ಯಾಂಕ್ ವ್ಯವಸ್ಥಾಪಕರಾದ ಪದ್ಮಾವತಿ ಕುಲಕರ್ಣಿ ಕಲ್ಯಾಣಿ ಸಂಗಮ್ ಕೃಷ್ಣ ಜೋಶಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.