ಇಂಡಿಯಲ್ಲಿ ಪಹಲ್ಗಾಮ್ ದಾಳಿ ಖಂಡಿಸಿ ಬೃಹತ್ ಪ್ರತಿಭಟನೆ
ಲೋಕದರ್ಶನ ವರದಿ
ಇಂಡಿ 24: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇಂಡಿ ಶಾಖೆ ವತಿಯಿಂದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಮತ್ತು ದಾಳಿಯಲ್ಲಿ ಹುತಾತ್ಮರಾದ ನಾಗರಿಕರಿಗೆ ಬಸವೇಶ್ವರ ವೃತ್ತದ ಬಳಿ ಮತ್ತು ಮಿನಿ ವಿಧಾನಸೌಧ ಮುಂದೆ ಸುಮಾರು 3 ಗಂಟೆಗಳ ಕಾಲ ರಸ್ತೆ ಬಂದ್ ಮಾಡಿ ಬೃಹತ್ ಪ್ರತಿಭಟನೆ ಮಾಡಿದರು.
ಸರ್ವಜ್ಞ ಅಕಾಡೆಮಿ ಸಂಸ್ಥಾಪಕ ನಾಗೇಶ್ ಹೇಗಡ್ಯಾಳ ಅವರು ಮಾತನಾಡಿ ಹಿಂದೂಗಳೇ ಯಾಕೆ ಟಾರ್ಗೆಟ್. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ದಲ್ಲಿ ನಡೆದಿರುವ ಉಗ್ರರ ದಾಳಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಆದರೆ, ಈ ದಾಳಿಯಲ್ಲಿ ಹಿಂದೂಗಳನ್ನೇ ಟಾರ್ಗೆಟ್ ಮಾಡಿಕೊಂಡು ಉಗ್ರರು ದಾಳಿ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370ನೇ ವಿಧಿ ತೆಗೆದ ಮೇಲೆ ಕಣಿವೆ ರಾಜ್ಯವು ಸಹಜ ಪರಿಸ್ಥಿತಿಗೆ ಮರಳಿತ್ತು. ಈಚೆಗೆ ವಿಧಾನಸಭೆ ಚುನಾವಣೆಯೂ ನಡೆದು ಎಲ್ಲವೂ ಸುಸೂತ್ರವಾಗಿಯೇ ಸಾಗುತ್ತಿತ್ತು. ಜಮ್ಮು ಮತ್ತು ಕಾಶ್ಮೀರಕ್ಕೆ ಕರ್ನಾಟಕವೂ ಸೇರಿದಂತೆ ಭಾರತದ ವಿವಿಧ ರಾಜ್ಯಗಳಿಂದ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಜನ ಹಿಂದೆಂದೂ ಕಾಣದಷ್ಟು ನೆಮ್ಮದಿಯ ಜೀವನವನ್ನು ನಡೆಸಲು ಶುರು ಮಾಡಿಕೊಂಡಿದ್ದರು. ಈ ರೀತಿ ಇರುವಾಗಲೇ ಹಿಂದೂಗಳನ್ನೇ ಟಾರ್ಗೆಟ್ ಮಾಡಿಕೊಂಡು ದಾಳಿ ಮಾಡಿರುವುದು ಖಂಡನಿಯ, ಇದಕ್ಕೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶೀಘ್ರದಲ್ಲೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಇಂಡಿ ತಹಶೀಲ್ದಾರ ಎಸ್ ಬಿ ಕಡಕಬಾವಿ ಅವರು ಪ್ರತಿಭಟನೆಕಾರ ಬಳಿ ಬಂದು ಮನವಿ ಸ್ವೀಕರಿಸಿದರು. ಇಂಡಿ ಪುರಸಭೆ ಸದಸ್ಯರಾದ ಅನೀಲಗೌಡ ಬಿರಾದಾರ, ಇಂಡಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಬಾಳು ಮುಳಜಿ, ಅಖಿಲ ಭಾರತ ವಿದ್ಯಾ ಪರಿಷತ್ ಪ್ರಾಂತ್ಯ ಕಾರ್ಯಕಾರಿಣಿ ಸದಸ್ಯರಾದ ಸಚೀನ ದಾನಗೊಂಡ, ಎಬಿವಿಪಿ ನಗರ ಅಧ್ಯಕ್ಷ ಬಿ ಎಚ್ ಬಗಲಿ, ಅರುಣ ಪೂಜಾರಿ, ರಾಹುಲ್ ಜಾಧವ, ನಿರ್ಮಲಾ ಬಿರಾದಾರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.