ಮೂಡಲಗಿ 30: ಪಟ್ಟಣದ ಚಿಕ್ಕಲಗಾರ ಓಣಿಯಲ್ಲಿ ಶನಿವಾರ ಮುಂಜಾನೆ 11 ಗಂಟೆಯ ಸುಮಾರಿಗೆ ಮಹೀಂದ್ರ ಪಿಕ್-ಅಪ್ ವಾಹನವೂ ಚಾಲಕನ ನಿರ್ಲಕ್ಷ್ಯತನಕ್ಕೆ ಮನೆಯೊಳಗೆ ನುಗ್ಗಿದ ಪರಿಣಾಮ ರಾಜು ಸಾನವಾಲೆ ಎಂಬುವವರ ಮನೆ ಹಾಗೂ ಪಕ್ಕದಲ್ಲಿ ನಿಲ್ಲಿಸಿದ್ದ ಎಕ್ಸೇಲ್ ಸ್ಕೂಟರ್ ಸಂಪೂರ್ಣವಾಗಿ ಹಾನಿಯಾಗಿದ್ದು ಮನೆಯಲ್ಲಿ ಯಾರು ಇಲ್ಲವಾಗಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ.
ಘಟನೆಯ ವಿವರ: ಪಟ್ಟಣದ ರೇಣುಕಾ ಸ್ಟುಡಿಯೋದ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಪ್ರತಿದಿನ ಪಿಕ್ ಅಪ್ ವಾಹನಗಳನ್ನು ಚಾಲಕರು ಬಾಡಿಗೆಗಾಗಿ ನಿಲ್ಲಿಸಿರುತ್ತಾರೆ. ಅದರಂತೆ ಶನಿವಾರವೂ ಚಾಲಕನೊರ್ವ ಮಹೀಂದ್ರ ಪಿಕ್-ಅಪ್ ( ನಂಬರ್ ಪ್ಲೇಟ್ ಇಲ್ಲದ) ವಾಹನವನ್ನು ನಿಲ್ಲಿಸಿ ಕೀಲಿಯನ್ನು ಅದರಲ್ಲಿಯೇ ಬಿಟ್ಟು ಚಾ ಕುಡಿಯಲು ತೆರಳಿದ್ದಾನೆ. ವಾಹನದಲ್ಲಿ ಕುಳಿತಿದ್ದ ಚಾಲಕನ ಸ್ನೇಹಿತ ಹಾಡು ಕೇಳುವ ಉದ್ದೇಶದಿಂದ ಕೀಲಿಯನ್ನು ತಿರುಗಿಸಿದ್ದು ವಾಹನವೂ ಏಕಾಏಕಿ ಮುಂದೆ ಸಾಗಿದ್ದು ಏನು ಮಾಡಬೇಕೆಂದು ತೋಚದೆ ವಾಹನವನ್ನು ಮನೆಯೊಳಗೆ ನುಗ್ಗಿಸಿದ್ದಾನೆ. ಮನೆಯೊಳಗೆ ಯಾರು ಇಲ್ಲವಾಗಿದ್ದರಿಂದ ಮನೆಯವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಶಾಲೆಗಳಿಗೆ ಬೇಸಿಗೆಯ ರಜೆ ಇರುವುದರಿಂದ ಮಕ್ಕಳು ದಿನಂಪ್ರತಿ ಈ ಸ್ಥಳದಲ್ಲಿಯೇ ಆಟವಾಡುತ್ತಿದ್ದರು ಆದರೆ ಈ ಅಪಘಾತ ಸಮಯದಲ್ಲಿ ಮಕ್ಕಳು ಇಲ್ಲದಿರುವುದು ಅದೃಷ್ಟವಶಾತ್ ಮತ್ತೊಂದು ದೊಡ್ಡ ಅನಾಹುತ ತಪ್ಪಿದಾಂತಯಿತು ಎಂದು ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ವಾಹನದ ಚಾಲಕ ಮತ್ತು ಆತನ ಸ್ನೇಹಿತ ಪರಾರಿಯಾಗಿದ್ದು ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.