ಮುದ್ದೇಬಿಹಾಳ: ಸಾರಿಗೆ ನೌಕರರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪಾಟೀಲರಿಗೆ ಮನವಿ

ಲೋಕದರ್ಶನ ವರದಿ

ಮುದ್ದೇಬಿಹಾಳ 24: ಸಾರಿಗೆ ಸಂಸ್ಥೆಯ ನಿಗಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಸಕರ್ಾರಿ ನೌಕರರೆಂದು ಪರಿಗಣಿಸಿ ಸರ್ಕಾರಿ  ಪಿಂಚಣಿ ಮತ್ತು ಎಲ್ಲ ಸೌಲತ್ತು ನೀಡುವಂತೆ ಮುಖ್ಯಮಂತ್ರಿಗಳ ಮನವೊಲಿಸಬೇಕು ಎಂದು ಆಗ್ರಹಿಸಿ ಕೆಎಸ್ಆರ್ಟಿಸಿ ಮೂಲಭೂತ ಹಕ್ಕುಗಳ ವಿಚಾರ ವೇದಿಕೆಯ ಸ್ಥಳೀಯ ಘಟಕದ ಪದಾಧಿಕಾರಿಗಳು ಗೃಹ ಸಚಿವ ಎಂ.ಬಿ.ಪಾಟೀಲರಿಗೆ ಮನವಿ ಸಲ್ಲಿಸಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಚಿವರನ್ನು ಭೇಟಿ ಮಾಡಿದ ವೇದಿಕೆಯ ಸ್ಥಳೀಯ ಪದಾಧಿಕಾರಿಗಳಾದ ಎಸ್.ಆರ್.ಮುಲ್ಲಾ, ವಿ.ಎಂ.ಕುಲಕರ್ಣಿ, ಎ.ಐ.ಆಸ್ಮಿ, ಮಹೆಬೂಬ ಮುಲ್ಲಾ, ಮಂಜುನಾಥ ಸಜ್ಜನ ಮತ್ತಿತರರು ಬೇಡಿಕೆ ಈಡೇರಿಕೆಯ ಅವಶ್ಯಕತೆಯನ್ನು ಸಚಿವರಿಗೆ ವಿವರಿಸಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಸಹಕಾರ ನೀಡಬೇಕು ಎಂದು ಕೋರಿದರು.

ನೌಕರಿಗೆ ಸೇರಿಕೊಂಡಾಗಿನಿಂದ ನಿವೃತ್ತಿವರೆಗೂ ಶ್ರಮವಹಿಸಿ ದುಡಿಯುವ ಕೆಎಸ್ಆರ್ಟಿಸಿ ನೌಕರರು ಶ್ರಮ ಜೀವಿಗಳು. ಸಕರ್ಾರದಿಂದಲೇ ನಡೆಯುತ್ತಿರುವ ವಿವಿಧ ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಹಿಂದಿನಸರ್ಕಾರಗಳು  ವೇತನ ತಾರತಮ್ಯ ಎಸಗುತ್ತಾ ಬಂದಿದ್ದಾರೆ. ಸರ್ಕಾರದ ಸೌಲತ್ತು, ಪಿಂಚಣಿ ಇಲ್ಲದೆ ಕಷ್ಟಗಳ ನಡುವೆಯೂ ನೌಕರರು ಶ್ರದ್ಧೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಇವರಿಗೆ ಜಿಗುಪ್ಸೆ ಶುರುವಾಗಿದೆ. ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವ ಈ ನೌಕರರು ಇದೀಗ ಸಹನೆಯನ್ನು ಮೀರುವ ಹಂತಕ್ಕೆ ಬಂದಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ನೆರೆಯ ಆಂಧ್ರ ಪ್ರದೇಶದಲ್ಲಿ ಸಾರಿಗೆ ನೌಕರರನ್ನು ಸರ್ಕಾರದ ಜೊತೆ ವಿಲಿನಗೊಳಿಸಿದಂತೆ ಇಲ್ಲೂ ಮಾಡಬೇಕು. ಇದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ. ಸಾರಿಗೆ ಸಚಿವರೂ ಧನಾತ್ಮಕ ಹೇಳಿಕೆ ನೀಡಿದ್ದಾರೆ. 

ಪೋಲೀಸ್ ಇಲಾಖೆಯ ನೌಕರರಿಗೆ ಔರಾದಕರ ವರದಿಯನ್ನು ಅನುಷ್ಠಾನಗೊಳಿಸಿದ ರೀತಿಯಲ್ಲಿ ಸಾರಿಗೆ ನೌಕರರ ಬೇಡಿಕೆಗಳನ್ನೂ ಮುಖ್ಯಮಂತ್ರಿಗಳ ಮೂಲಕ ಈಡೇರಿಸಿ ಸಾರಿಗೆ ನೌಕರರ ಸಂಕಷ್ಟಗಳಿಗೆ ಮುಕ್ತಾಯ ಹೇಳಬೇಕು ಎಂದು ಪದಾಧಿಕಾರಿಗಳು ಕೇಳಿಕೊಂಡರು.

ಅಹವಾಲು ಆಲಿಸಿದ ಸಚಿವರು ಸಾರಿಗೆ ನೌಕರರ ಬೇಡಿಕೆ ನ್ಯಾಯಯುತವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು. ಮಾಜಿ ಸಚಿವರಾದ ಬಸವರಾಜ ಹೊರಟ್ಟಿ, ಸಿ.ಎಸ್.ನಾಡಗೌಡ, ಎಪಿಎಂಸಿ ಅಧ್ಯಕ್ಷ ಗುರಣ್ಣ ತಾರನಾಳ, ಪುರಸಭೆ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ ಮತ್ತಿತರರು ಇದ್ದರು.