ಚುಟುಕು ಚಿಕ್ಕದಾದರೂ ಅರ್ಥದಲ್ಲಿ ತಿವಿಕ್ರಮನಂತೆ-ನಾಗೇಶ್ ನಾಯಕ

Like Tivikram in a short but meaningful way, Nagesh is the hero

ಚುಟುಕು ಚಿಕ್ಕದಾದರೂ ಅರ್ಥದಲ್ಲಿ ತಿವಿಕ್ರಮನಂತೆ-ನಾಗೇಶ್ ನಾಯಕ

ಬೆಳಗಾವಿ 03 : ಮೂರು ಸಾಲುಗಳಲ್ಲಿ ಓದುಗರ ಮೊಗದಲ್ಲಿ ನಗೆಯರಳಿಸುವ, ಅಗಾಧ ಅರ್ಥವನ್ನು ಹೊಮ್ಮಿಸುವ, ವ್ಯವಸ್ಥೆಯ ವಿರುದ್ಧ ಪ್ರತಿಭಟನೆಯ ಅಸ್ತ್ರದ ತರಹ ಪ್ರಭಾವ ಬೀರುವ ಚುಟುಕು, ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತಿವಿಕ್ರಮನಂತೆ ಎಂದು ನಾಡಿನ ಖ್ಯಾತ ಕವಿ, ವಿಮರ್ಶಕ ನಾಗೇಶ್ ಜೆ. ನಾಯಕ ನುಡಿದರು. ಅವರು ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ನಾಲ್ಕನೇಯ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಚುಟುಕು ಸಾಹಿತ್ಯದ ಒಳನೋಟ ಕುರಿತು ಅವರು ಮಾತನಾಡಿದರು.ಇಂದು ಚುಟುಕು ಅತ್ಯಂತ ಜನಪ್ರಿಯತೆ ಪಡೆದಿರುವ ಸಾಹಿತ್ಯದ ಪ್ರಕಾರವಾಗಿದ್ದು ಬಹಳಷ್ಟು ಬರಹಗಾರರ ಇಷ್ಟದ ಪ್ರಕಾರವೂ ಕೂಡ ಆಗಿದೆ. ಪ್ರತಿ ವರ್ತಮಾನ ಪತ್ರಿಕೆ, ನಿಯತಕಾಲಿಕಗಳಲ್ಲಿ ಇದಕ್ಕೆ ಅಗ್ರಸ್ಥಾನ ಮೀಸಲು. ಚುಟುಕುಗಳೆಂದರೆ ಮೂಗು ಮುರಿಯುತ್ತಿದ್ದ ಅದೊಂದು ಸಾಹಿತ್ಯದ ಪ್ರಕಾರವೇ ಅಲ್ಲ ಎಂದು ವಾದ ಮಾಡುತ್ತಿದ್ದವರೇ ಇಂದು ಮಸ್ತಕದ ಮೇಲೆ ಹೊತ್ತು ಮೆರೆಸುತ್ತಿದ್ದಾರೆ. ಇಂದು ರಾಜ್ಯಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿರುವುದು ಅದೊಂದು ಸರ್ವಮಾನ್ಯತೆ ಜನಾಕರ್ಷಣೆ ಪಡೆದಿದೆ ಎಂಬುದಕ್ಕೆ ಉದಾಹರಣೆ. ಜಗತ್ತಿನ ಎಲ್ಲ ಭಾಷೆಯಲ್ಲೂ ಚುಟುಕುಗಳಿವೆ. ಸಂಸ್ಕೃತ ಸುಭಾಷಿತ, ದೇವರ ಸ್ತುತಿಗಳು ವ್ಯಾಕರಣಬದ್ಧವಾಗಿ ಸಿಗುವ ಜಗತ್ತಿನ ಮೊಟ್ಟ ಮೊದಲ ಹನಿಗವನಗಳು ಎಂದು ಊಹೆ ಮಾಡಲಾಗಿದೆ. ಜಪಾನಿನ ಹೈಕು, ಇಂಗ್ಲೀಷಿನ ಲಿಮರಿಕ್ಕು ಐದು ಸಾಲಿನ ಪುಟ್ಟ ಕವನಗಳು. ಹಿಂದಿಯಲ್ಲಿ ಶಾಯರಿ, ಕನ್ನಡದ ಕಂದಪದ್ಯ, ಸರ್ವಜ್ಞನ ತ್ರಿಪದಿ, ಶರಣರ ವಚನಗಳು, ದಾಸರ ಉಗಾಭೋಗ ಇವೆಲ್ಲವೂ ಚುಟುಕುಗಳ ಮಾದರಿಯಲ್ಲಿಯೇ ಇವೆ. ಹೆಸರಾಂತ ಸಾಹಿತಿಗಳಾದ ಎಂ ಅಕಬರ ಅಲಿ, ದಿನಕರ ದೇಸಾಯಿ, ಜಿ. ಪಿ. ರಾಜರತ್ನಂ, ಡಿವಿಜಿ, ಕುವೆಂಪು, ವೈಎನ್‌ಕೆ, ಲಂಕೇಶ್, ಡುಂಡಿರಾಜ್ ಮೊದಲಾದವರು ಚುಟುಕುಗಳನ್ನು ರಚಿಸಿದ್ದಾರೆ. ಇಂದಿನ ಯುವಕವಿಗಳು ಹೊಸದಾದ ಸಿದ್ಧತೆ, ವಿಭಿನ್ನ ಹೊಳಹು, ಗಂಭೀರ ಓದಿನ ಮೂಲಕ ಚುಟುಕುಗಳನ್ನು ರಚಿಸಬೇಕು ಎಂದು ಅವರು ಕರೆ ಕೊಟ್ಟರು. ಪ್ರಸಿದ್ಧ ಚುಟುಕು ಕವಿಗಳ ಚುಟುಕುಗಳನ್ನು ಉದಾಹರಿಸಿದ್ದು ಜನಮೆಚ್ಚುಗೆ ಗಳಿಸಿತು. ವೇದಿಕೆ ಮೇಲೆ ಸರ್ವಾಧ್ಯಕ್ಷರಾದ ಅಪ್ಪಾಸಾಹೇಬ ಅಲಿಬಾದಿ, ಆನಂದ ಸೊರಗಾಂವಿ ಉಪಸ್ಥಿತರಿದ್ದರು. ಡಾ. ಅಡಿವೆಪ್ಪ ಇಟಗಿ ನಿರೂಪಿಸಿದರು.