ಕುಡಿಯುವ ನೀರಿನ ವಿಷಯದಲ್ಲಿ ಬೇಜವಾಬ್ದಾರಿ ಸಹಿಸುವುದಿಲ್ಲ

Irresponsibility regarding drinking water will not be tolerated

ಕುಡಿಯುವ ನೀರಿನ ವಿಷಯದಲ್ಲಿ ಬೇಜವಾಬ್ದಾರಿ ಸಹಿಸುವುದಿಲ್ಲ 

ವಿಜಯಪುರ, ಮಾ.12: : ಬರುವ ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಈಗಿನಿಂದಲೇ ಯೋಜನೆಯೊಂದನ್ನು ರೂಪಿಸಿಕೊಂಡು ಕಾರ್ಯನಿರ್ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದರು.  

ಜಿಲ್ಲೆಯ ವಿವಿಧ ತಾಲೂಕಾ ತಹಶೀಲ್ದಾರ, ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಬುಧವಾರ (ಮಾ.12)ರಂದು ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದ ಅವರು, ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಪ್ರಸ್ತುತ ಜಿಲ್ಲೆಯಲ್ಲಿ ಅಂತಹ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಈಗಿರುವ ನೀರನ್ನು ಬಳಕೆ ಮಾಡಿಕೊಂಡಲ್ಲಿ ಏಪ್ರಿಲ್ ಅಂತ್ಯದವರೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದ್ಯಾಗ್ಯೂ ಮುಂದಿನ ಜುಲೈ ಅಂತ್ಯದವರಗೆ ಜಿಲ್ಲೆಗೆ ಬೇಕಾಗುವ ನೀರಿನ ಅವಶ್ಯಕತೆಗನುಸಾರವಾಗಿ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.  

ಕೆರೆಗಳಲ್ಲಿ ನೀರು ತುಂಬಿಸಲು ಪ್ರತಿ 45 ದಿನಗಳಿಗೆ 2.5 ಟಿಎಂಸಿ ಅವಶ್ಯಕತೆ ಇದ್ದು, ಈಗಿರುವ  ನೀರನ್ನು ಸದ್ಭಳಕೆ ಮಾಡಿಕೊಂಡಲ್ಲಿ ಬರುವ ಏಪ್ರಿಲ್ ಅಂತ್ಯದವರೆಗೆ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬಹುದಾಗಿದ್ದು, ಈ ನಿಟ್ಟಿನಲ್ಲಿ ಸೂಕ್ತ ಯೋಜನೆ ರೂಪಿಸಿಕೊಂಡು ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.   

ಜಿಲ್ಲೆಯಲಿರುವ 157 ಕೆರೆಗಳ ಪೈಕಿ 21 ಕೆರೆಗಳಲ್ಲಿ ಶೇ.1ರಿಂದ 30ರಷ್ಟು, 28 ಕೆರೆಗಳಲ್ಲಿ ಶೇ.31 ರಿಂದ 50 ರಷ್ಟು, 92 ಕೆರೆಗಳಲ್ಲಿ ಶೇ.50 ರಿಂದ 99 ರಷ್ಟು ಅಂದರೆ 1.68 ಟಿಎಂಸಿ ನೀರು ಲಭ್ಯವಿದೆ. ಈ ಕೆರೆಗಳಲ್ಲಿನ ನೀರು ವ್ಯಯತವಾಗದಂತೆ ಹಾಗೂ ನೀರಿನ ಸದ್ಭಳಕೆಯಾಗುವಂತೆ ನೋಡಿಕೊಳ್ಳಬೇಕು. ಕೆರೆಗಳ ಸುತ್ತಮುತ್ತಲೂ ಜಾಲಿ ಕಂಟಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಬೇಕು. ಜಾಲಿ ಕಂಟಿಗಳು ಬೆಳೆದು ನೀರಿನ ವ್ಯಯವಾಗದಂತೆ ನೋಡಿಕೊಳ್ಳಬೇಕು. ಬಹುಹಳ್ಳಿ ಯೋಜನೆ ಕೆರೆಗಳ ಸುತ್ತಲಿನಲ್ಲಿ ನೀರಾವರಿಗಾಗಿ ಅನಧಿಕೃತವಾಗಿ ಅಳವಡಿಸಲಾದ ಪಂಪಸೆಟ್‌ಗಳನ್ನು ಕೂಡಲೆ ತೆರವುಗೊಳಿಸಲು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ ಅವರು ಈ ಕಾರ್ಯದಲ್ಲಿ ಯಾವುದೇ ಲೋಪವನ್ನು ಸಹಿಸುವುದಿಲ್ಲ. ಇದಕ್ಕೆ ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ ಕ್ರಮ ವಹಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.  

 ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿನ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಕೆರೆಗಳಲ್ಲಿನ ನೀರು ವಿನಾಕಾರಣ ಬಳಕೆಯಾಗದಂತೆ ನೋಡಿಕೊಳ್ಳಬೇಕು. ಪ್ರತಿ ಸೋಮವಾರ ನೀರಿನ ಪ್ರಮಾಣದ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ ಅವರು, ಕುಡಿಯುವ ನೀರನ್ನು ನೀರಾವರಿಗೆ ಬಳಕೆಯಾಗದಂತೆ ಕಟ್ಟೆಚ್ಚರ ವಹಿಸುವಂತೆ ಅವರು ಸೂಚನೆ ನೀಡಿದರು.  

ನಾರಾಯಣಪುರ ಜಲಾಶಯದಿಂದ 4.3 ಹಾಗೂ 1.7 ಟಿಎಂಸಿ ನೀರನ್ನು ಕುಡಿಯುವ ನೀರಿಗಾಗಿ ಕಾಯ್ದಿರಿಸಲಾಗಿದೆ. ಕಾಲುವೆಗಳ ಮೂಲಕ 1.1 ಟಿಎಂಸಿ  ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಪಟ್ಟಣ ಪಂಚಾಯತ್‌ಗಳಿಗೆ ಬರುವ ಜೂನ್‌-ಜುಲೈ ಮಾಹೆವರೆಗೆ ಕುಡಿಯುವ ನೀರು ಪೂರೈಸಲು 1.13 ಟಿಎಂಸಿ ನೀರು ಬಳಕೆಯಾಗಲಿದ್ದು, 4.3 ಟಿಎಂಸಿ ನೀರು ಆಲಮಟ್ಟಿ ಜಲಾಶಯದಲ್ಲಿ ಕಾಯ್ದಿರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.  

ಮುಂದಿನ ಬೇಸಿಗೆಯಲ್ಲಿ ಸಿಂದಗಿಯ ಕೆಲವು ವಾರ್ಡಗಳಲ್ಲಿ ಮಾತ್ರ  ಒಂದು ವಾರಗಳ ಕಾಲ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾಗಿದ್ದು,ಈ ಸಂದರ್ಭದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕಾಗುತ್ತದೆ. ಕೆರೆತುಂಬುವ ಯೋಜನೆಯಡಿ 4.4 ಟಿಎಂಸಿ ನೀರು ಉಳಿದಿದೆ. ತುಬಚಿ-ಬಬಲೇಶ್ವರ ನೀರಾವರಿ ಯೋಜನೆಯಲ್ಲಿ 0.5 ಟಿಎಂಸಿ ನೀರು ಕಾಯ್ದಿರಿಸಲಾಗಿತ್ತು. ಆದರೆ 1.6 ಟಿಎಂಸಿ ನೀರು  ಹೆಚ್ಚುವರಿಯಾಗಿ ಬಳಕೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ಒದಗಿಸಿದರು.  

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಬದ್ರೂದ್ದಿನ ಸೌದಾಗರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.