ಅಲಗೇರಿಯಲ್ಲಿ ಮಾಹಿತಿ ವಿನಿಮಯ ಕಾರ್ಯಕ್ರಮ
ಕಾರವಾರ 27: ಅಂಕೋಲಾ ತಾಲೂಕಿನ ಅಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎರಡು ಪ್ರತ್ಯೇಕ ಕಾಮಗಾರಿ ಸ್ಥಳಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕುರಿತು ಜಿಲ್ಲಾ ಐಇಸಿ ಸಂಯೋಜಕ ಕಿರಣ ಜೋತೆಪ್ಪನವರ ನೇತೃತ್ವದಲ್ಲಿ ಸೋಮವಾರ ಮಾಹಿತಿ ವಿನಿಮಯ ಕಾರ್ಯಕ್ರಮ ನಡೆಯಿತು.
ಬೊಗ್ರಿಬೈಲ್ ಲಕ್ಷ್ಮಣ ಬೇಡು ಗೌಡ ಅವರ ಜಮೀನಿನ ಹತ್ತಿರದಿಂದ ಅಪ್ಪಾಣಿ ನಾಗು ಗೌಡ ಜಮೀನಿನ ವರೆಗೆ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಹಾಗೂ ಬಾಳೆಗುಳಿ ಕ್ರಾಸ್ ರವಿ ನಾಯಕ ಅವರ ಜಮೀನಿನ ಹತ್ತಿರದಿಂದ ಅಲಗೇರಿ ಗ್ರಾಮ ಪಂಚಾಯತ್ ವರೆಗೆ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಮನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿದ್ದ ಕೂಲಿಕಾರರನ್ನು ಸೇರಿಸಿ, ಯೋಜನೆಯ ಕುರಿತು ಉಪಯುಕ್ತ ಮಾಹಿತಿ ನೀಡಿದರು.
ಮನರೇಗಾ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿರುವ ಪ್ರತಿ ಕುಟುಂಬಕ್ಕೆ ದಿನವೊಂದಕ್ಕೆ 349 ರೂ. ಕೂಲಿಯಂತೆ ವರ್ಷಕ್ಕೆ 100 ದಿನಗಳ ಕೆಲಸ ನೀಡಲಾಗುತ್ತಿದೆ. ಅರ್ಹ ಕುಟುಂಬಕ್ಕೆ 5 ಲಕ್ಷ ರೂ. ಮಿತಿಯೊಳಗೆ ವೈಯಕ್ತಿಕ ಕಾಮಗಾರಿ ಸೌಲಭ್ಯ ಪಡೆದುಕೊಳ್ಳಲು ಅವಕಾಶವಿದೆ. ಪುರುಷ ಮತ್ತು ಮಹಿಳೆಯರಿಗೆ ಸಮಾನ ವೇತನ ನೀಡಲಾಗುತ್ತಿದೆ ಮತ್ತು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಕೆಲಸದ ಪ್ರಮಾಣದಲ್ಲಿ ಶೇ. 50 ರಷ್ಟು ರಿಯಾಯಿತಿ ಸಹ ಇದೆ. ಕೆಲಸದ ಅವಶ್ಯಕತೆ ಇರುವವರು ನಮೂನೆ 6ರಲ್ಲಿ ಗ್ರಾಮ ಪಂಚಾಯತಿಗೆ ಬೇಡಿಕೆ ಸಲ್ಲಿಸಿ, 15 ದಿನಗೊಳಗೆ ಉದ್ಯೋಗ ಪಡೆಯಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ವಿನೋದ ಗಾಂವಕರ್, ಗ್ರಾಮ ಪಂಚಾಯತ್ ಸಿಬ್ಬಂದಿ ಸತೀಶ್, ಕೂಲಿಕಾರರು ಉಪಸ್ಥಿತರಿದ್ದರು.