ಬಿಜೆಪಿ ದೇಶವನ್ನು ಒಗ್ಗೂಡಿಸಿದರೆ, ಕಾಂಗ್ರೆಸ್ ವಿಭಜಿಸುತ್ತಿದೆ: ಅಮಿತ್ ಶಾ


ಸಾಂಗ್ಲಿ (ಮಹಾರಾಷ್ಟ್ರ) ಏ 17  ಗಡಿ ಭದ್ರತೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಡಿಕೆ ಇಡುವ ಮೂಲಕ ಕಾಂಗ್ರೆಸ್ ಈ ರಾಜ್ಯವನ್ನು ದೇಶದಿಂದ ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. 

ಸಾಂಗ್ಲಿ ಜಿಲ್ಲೆಯ ತಾಸ್ಗೋನ್ ತೆಹ್ಸಿಲ್ನಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಮ್ಮು-ಕಾಶ್ಮೀರ ದೇಶದ ಸಮಗ್ರತೆಯ ಭಾಗ. ಈ ರಾಜ್ಯಕ್ಕೆ ಪ್ರತ್ಯೇಕ ಪ್ರಧಾನಿ ಬೇಡಿಕೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ಹೇಳಿದರು. ಬಿಜೆಪಿ ಅಭ್ಯರ್ಥಿ  ಸಂಜಯ್ ಕಾಕ ಪಾಟೀಲ್ ಅವರ ಪರವಾಗಿ ಅಮಿತ್ ಶಾ ಪ್ರಚಾರ ನಡೆಸಿದರು. ರಾಜ್ಯದಲ್ಲಿ ಕಳೆದ 15 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್- ನ್ಯಾಷನಲಿಸ್ಟ್ ಕಾಂಗ್ರೆಸ್ ಪಾಟರ್ಿ (ಎನ್ಸಿಪಿ) ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ಅಜಿತ್ ಪವಾರ್ ಅವರು ಸಚಿವರಾಗಿದ್ದಾಗ ಅಂದರೆ 1999-2009ರ ಅವಧಿಯಲ್ಲಿ ನೀರಾವರಿ ಯೋಜನೆಗಳಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು. ಪಕ್ಷದ ಸಾಧನೆಗಳ ಬಗ್ಗೆ ವಿವರಿಸಿದ ಅವರು, ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರ್ಕಾರ  ರೈತರು ಮತ್ತು ಜನ ಸಾಮಾನ್ಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, 35 ಲಕ್ಷ ರೈತರ ಸಾಲ ಮನ್ನಾ ಮಾಡಿದೆ ಮತ್ತು ಜಿಎಸ್ಟಿ ತೆರಿಗೆ ವ್ಯವಸ್ಥೆ ಜಾರಿಗೆ ತಂದಿದೆ ಎಂದರು.ಆರ್ಥಿಕವಾಗಿ ಹಿಂದುಳಿದವರಿಗೆ   ಶೇಕಡಾ 10ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ. 2014ರ ವಿಜಯ ಈ ಬಾರಿಯೂ ಪುನರಾವರ್ತನೆಯಾಗಲಿದೆ ಮತ್ತು ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಅಮಿತ್ ಶಾ ಹೇಳಿದರು.