ಲಖೀಂಪುರ ಖೇರಿ, ಏ 24 : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೃಷಿ ವಲಯದಲ್ಲಿನ ಸಮಸ್ಯೆಗಳ ನಿವಾರಣೆಗೆ ಕೃಷಿಗೆ ಪ್ರತ್ಯೇಕ ಬಜೆಟ್ ಮಂಡನೆ ಮಾಡಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಒಂದು ಸಾಮಾನ್ಯ ಬಜೆಟ್ ಮತ್ತೊಂದು ರೈತರ ಬಜೆಟ್ ಮಂಡನೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. 20 ಸಾವಿರ ರೂಪಾಯಿ ಸಾಲ ಮರುಪಾವತಿಸಲಾಗದ ರೈತನನ್ನು ಜೈಲಿಗಟ್ಟುತ್ತಿರುವುದು ದುರದೃಷ್ಟಕರ ಎಂದ ಅವರು, ಈ ಬಜೆಟ್ ಮಂಡನೆಯಾದಲ್ಲಿ ರೈತರ ಸಮಸ್ಯೆಗಳು ದೂರವಾಗಲಿವೆ. ರೈತರು ಗೌರವಯುತ ಜೀವನ ನಡೆಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಲಖೀಂಪುರದಲ್ಲಿ ಪಕ್ಷದ ಅಭ್ಯರ್ಥಿ ಜಾಫರ್ ಅಲಿ ನಖ್ವಿ ಮತ್ತು ಉನ್ನಾನೋದ ಪಕ್ಷದ ಅಭ್ಯರ್ಥಿ ತಂಡನ್ ಪರ ಬುಧವಾರ ಪ್ರಚಾರ ನಡೆಸಿದ ರಾಹುಲ್ ಗಾಂಧಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಬಡವರ ಖಾತೆಗೆ 15 ಲಕ್ಷ ರೂಪಾಯಿ ಹಾಕುವ ಭರವಸೆ ಈಡೇರಿಸಿಲ್ಲ. ಆದರೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಐದು ಕೋಟಿ ಬಡಕುಟುಂಬಗಳಿಗೆ ವಾಷರ್ಿಕ 72 ಸಾವಿರ ರೂಪಾಯಿ ನೀಡಲಾಗುವುದು ಎಂದರು. ನೋಟು ನಿಷೇಧದಿಂದ ದೇಶದ ಆರ್ಥಿಕತೆಗೆ ಭಾರೀ ಪೆಟ್ಟು ಬಿದ್ದಿದೆ, ಉದ್ಯೋಗ ಪ್ರಮಾಣ ಕುಸಿದಿದೆ ಎಂದು ಮೋದಿ ಸರಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.