ಲೋಕದರ್ಶನ ವರದಿ
ಹರಪನಹಳ್ಳಿ 02: ಹರಿದ್ವಾರ ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ತಾಲೂಕಿನ ಹಲುವಾಗಲು ಗ್ರಾಮದ ಯೋಧ ತಿಪ್ಪನಹಳ್ಳಿ ಬಸವರಾಜ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಸೋಮವಾರ ನಡೆಯಿತು.
ಕೇಂದ್ರೀಯ ಕೈಗಾರಿಕಾ ಭದ್ರತಾ ದಳ(ಜಿಐಎಸ್ಎಫ್)ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜ್ ಅವರು ಕಾರು ಮತ್ತು ಬೈಕ್ ಅಪಘಾತದಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗಿದ್ದರು. ಮೃತ ದೇಹ ಹರಿದ್ವಾರದಿಂದ ಭಾನುವಾರ ರಾತ್ರಿ ಸ್ವಗ್ರಾಮಕ್ಕೆ ಆಗಮಿಸಿತು. ತಾಲೂಕಿನ ದುಗ್ಗಾವತ್ತಿ ಗ್ರಾಮದ ಬಳಿ ರಾತ್ರಿ 7.30ರ ಸಮಯದಲ್ಲಿ ತಹಶೀಲ್ದಾರ್ ಡಾ.ನಾಗವೇಣಿ ಅವರಿಗೆ ಜಿಐಎಸ್ಎಫ್ ಸಿಬ್ಬಂದಿ ಮೃತ ದೇಹವನ್ನು ಹಸ್ತಾಂತರಿಸಿದರು.
ದುಗ್ಗಾವತ್ತಿ, ಕಡತಿ, ವಟ್ಲಹಳ್ಳಿ, ನಂದ್ಯಾಲ ನಿಟ್ಟೂರು ಮಾರ್ಗವಾಗಿ ರಾತ್ರಿ 9 ಗಂಟೆಗೆ ಸ್ವಗ್ರಾಮಕ್ಕೆ ಮೃತ ದೇಹ ಆಗಮಿಸಿದ್ದು, ರಾತ್ರಿಯೇ ಮೃತರ ಕುಟುಂಬಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ಪೊಲೀಸ್ ತಂಡದಿಂದ ಕವಾಯಿತು ನಡೆಸಿ ನಂತರ ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ನಂತರ ಸಕಲ ವಾದ್ಯಗಳೊಂದಿಗೆ ಮೃತ ದೇಹವನ್ನು ಶಾಲೆ ಅವರಣದಿಂದ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು.
ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಹಿಂಭಾಗದ ಜಮೀನಿನಲ್ಲಿ ಸಕಲ ಸಕರ್ಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು. ತಂದೆ ಹನುಮಂತಪ್ಪ, ಅಣ್ಣ ದುರುಗಪ್ಪ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.
ಶಾಸಕ ಜಿ.ಕರುಣಾಕರರೆಡ್ಡಿ, ಜಿ.ಪಂ ಸದಸ್ಯೆ ಸುವರ್ಣ ಆರುಂಡಿ ನಾಗರಾಜ್, ಗ್ರಾ.ಪಂ ಅಧ್ಯಕ್ಷೆ ರತ್ನಮ್ಮ ಸೋಮಪ್ಪ ಅಂತಿಮ ದರ್ಶನ ಪಡೆದುಕೊಂಡರು. ಯೋಧನ ಅಗಲಿಕೆಯಿಂದ ಇಡೀ ಗ್ರಾಮದಲ್ಲಿ ನಿರವಮೌನ ಅವರಿಸಿತ್ತು. ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು. ಸಿಪಿಐ ಡಿ.ದುರುಗಪ್ಪ ನೇತೃತ್ವದ ಪೊಲೀಸ್ ತಂಡ ಕಟ್ಟೆಚ್ಚರವಹಿಸಿ ಅಂತಿಮ ಯಾತ್ರೆಗೆ ಅವಕಾಶ ಕಲ್ಪಿಸಿದ್ದರು.