ಅಕಾಲಿಕ ಮಳೆ, ಬಿರುಗಾಳಿಗೆ ಅಥಣಿ ದ್ರಾಕ್ಷಿ ಬೆಳೆಗಾರ ಶಿವು ನಾಯಿಕರಿಗೆ ಕೋಟಿ ರೂ.ಗಳಷ್ಟು ನಷ್ಟ

Grape grower Shivu Naikari suffers losses worth crores of rupees due to unseasonal rains and storms
ಅಕಾಲಿಕ ಮಳೆ, ಬಿರುಗಾಳಿಗೆ ಅಥಣಿ ದ್ರಾಕ್ಷಿ ಬೆಳೆಗಾರ ಶಿವು ನಾಯಿಕರಿಗೆ ಕೋಟಿ ರೂ.ಗಳಷ್ಟು ನಷ್ಟ  
ಅಥಣಿ, 08 : ಅಕಾಲಿಕ ಮಳೆಗೆ ಒಂದು ಕೋಟಿಗೂ ಹೆಚ್ಚು ಮೊತ್ತದ ಒಣ ದ್ರಾಕ್ಷಿ ಹಾಳಾಗಿ  ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ ದ್ರಾಕ್ಷಿ ಬೆಳೆಗಾರ ಶಿವು ನಾಯಿಕರ ಸ್ಥಿತಿ.       ಹೊಸಟ್ಟಿ ಗ್ರಾಮದ ಶಿವು ನಾಯಿಕ ಸುಮಾರು 9 ಎಕರೆಯಲ್ಲಿ ಕಷ್ಟಪಟ್ಟು  ದ್ರಾಕ್ಷಿ ಬೆಳೆದು ಒಣ ದ್ರಾಕ್ಷಿಗಾಗಿ  ವಿಜಯಪುರ ರಸ್ತೆಯಲ್ಲಿರುವ ಕರಿ ಮಸೂತಿ ಹತ್ತಿರ ನಿರ್ಮಿಸಲಾಗಿದ್ದ ಶೆಡ್ಡುಗಳಲ್ಲಿ ಕಳೆದ 15 ದಿನಗಳಿಂದ ಹಾಕಿದ್ದರು. ಇನ್ನೆನೋ ಒಣ ದ್ರಾಕ್ಷಿ ಎರಡೇ ಎರಡು ದಿನಗಳಲ್ಲಿ ಕೈಗೆ ಬರುತ್ತದೆ ಎನ್ನುವಷ್ಟರಲ್ಲಿಯೇ ಭಾರೀ ಬಿರುಗಾಳಿ ಮತ್ತು ಮಳೆಗೆ ಶೆಡ್ಡುಗಳ ಮೇಲೆ ಹಾಕಿದ್ದ ಪ್ಲಾಸ್ಟಿಕ್ ಮತ್ತು ಶೆಡ್ಡ ನಟ್ ಹರಿದು ಶೆಡ್ಡಗಳಲ್ಲಿ ಮಳೆ ನೀರು ಹೊಕ್ಕಿದ ಪರಿಣಾಮ ಸುಮಾರು ಒಂದು ಕೋಟಿ ರೂ.ಮೊತ್ತದ ಒಣ ದ್ರಾಕ್ಷಿ ಸಂಪೂರ್ಣ ಹಾಳಾದ ಪರಿಣಾಮ ದ್ರಾಕ್ಷಿ ಬೆಳೆಗಾರ ನಷ್ಟಕ್ಕೀಡಾಗಿದ್ದಾನೆ.       ನಷ್ಟಕ್ಕೋಳಗಾದ ದ್ರಾಕ್ಷಿ ಬೆಳೆಗಾರ ಶಿವು ನಾಯಿಕ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ದ್ರಾಕ್ಷಿ ಬೆಳೆ ಉತ್ತಮವಾಗಿ ಬಂದಿತ್ತು ಹೀಗಾಗಿ ಒಣ ದ್ರಾಕ್ಷಿ ಮಾಡಲು ಒಳ್ಳೆಯ ಹವಾಮಾನ ಇರುವುದರಿಂದ ಶೆಡ್ಡುಗಳಿಗೆ ಹಸಿ ದ್ರಾಕ್ಷಿ ಸಾಗಿಸಿ 15 ದಿನಗಳಾಗಿದ್ದವು ಇನ್ನು ಕೇವಲ 2 ದಿನಗಳಲ್ಲಿಯೇ ಒಣ ದ್ರಾಕ್ಷಿ ಸಂಪೂರ್ಣವಾಗಿ ಕೈಗೆ ಬರುತ್ತಿತ್ತು ಆದರೆ ಅಕಾಲಿಕ ಮಳೆ ಮತ್ತು ಭಾರೀ ಪ್ರಮಾಣದ ಬಿರುಗಾಳಿಗೆ ಒಣಗುವ ಹಂತದಲ್ಲಿದ್ದ ದ್ರಾಕ್ಷಿ ಶೆಡ್ಡಗಳಲ್ಲಿ ನೀರು ಹೊಕ್ಕಿದ ಪರಿಣಾಮ ಕೊಳೆತು ದುರ್ವಾಸನೆ ಬಿರುತ್ತಿವೆ ಎಂದ ಅವರು ಕಳೆದ ಎರಡ್ಮೂರು ವರ್ಷ ಒಣ ದ್ರಾಕ್ಷಿಗೆ ಒಳ್ಳೆಯ ಬೆಲೆ ಇರಲಿಲ್ಲ ಈ ವರ್ಷ ಒಂದು ಕಿಲೋ ಗೆ ಕನಿಷ್ಠ 250 ರಿಂದ 275 ದರ ಇದೆ ಆದರೆ ಅಕಾಲಿಕ ಮಳೆಗೆ ಒಣ ದ್ರಾಕ್ಷಿ ಹಾಳಾದ ಪರಿಣಾಮ 1 ಕೋಟಿಯಷ್ಟು ಹಾನಿ ಸಂಭವಿಸಿದೆ ಎಂದು ಹೇಳಿದರು. 
         ಎರಡು ದಿನ ಸತತ ಗಾಳಿ ಬೀಸಿ ಮಳೆ ಬಿದ್ದ ನಂತರ ಹಾಳಾದ ಒಣ ದ್ರಾಕ್ಷಿಯ ಕುರಿತು ಈಗಾಗಲೇ ಮಾಜಿ ಉಪ ಮುಖ್ಯಮಂತ್ರಿ, ಶಾಸಕರಾದ ಲಕ್ಚ್ಮಣ ಸವದಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ ಪರಿಣಾಮ ಸ್ಥಳಕ್ಕೆ ಇಲಾಖೆ ಅಧಿಕಾರಿಗಳು ಭೇಟಿ ಕೊಟ್ಟು ಪರೀಶೀಲಿಸಿ ಸರಕಾರದ ಗಮನಕ್ಕೆ ತರುವುದಾಗಿ ಹೇಳಿದ್ದಾರೆ ಜೊತೆಗೆ ಇಲಾಖೆಯಲ್ಲಿ ಅವಕಾಶ ಇರುವಷ್ಟು ಪರಿಹಾರ ಕೂಡ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದ ಅವರು ಸರಕಾರ ಇಂತಹ ಸಂದರ್ಭದಲ್ಲಿ ರೈತನಿಗೆ ತಕ್ಷಣ ಪರಿಹಾರ ಘೋಷಿಸಿ ಧೈರ್ಯ ತುಂಬ ಬೇಕು ಎಂದು ಆಗ್ರಹಿಸಿದರು. 
       ಶಾಸಕ ಲಕ್ಷ್ಮಣ ಸವದಿ ಸದ್ಯ ಅಥಣಿಯಲ್ಲಿ ಇಲ್ಲ ಹೀಗಾಗಿ ಅವರಿಗೆ ನಷ್ಟದ ಕುರಿತು ಮಾಹಿತಿ ವಿವರ ನೀಡಿದ್ದೇನೆ ಇದಕ್ಕೆ ಪ್ರತಿಯಾಗಿ ತಕ್ಷಣ ಸಂಬಂಧ ಪಟ್ಟ ಸಚಿವರ ಗಮನಕ್ಕೆ ತರುವೆ ಎಂದು ಭರವಸೆ ನೀಡಿದ್ದಾರೆ ಎಂದು ಶಿವು ನಾಯಿಕ ತಿಳಿಸಿದರು.     ಮತ್ತೋರ್ವ ದ್ರಾಕ್ಷಿ ಬೆಳೆಗಾರ ಬಸವರಾಜ ಆಜೂರ ಮಾತನಾಡಿ, ಒಣ ದ್ರಾಕ್ಷಿ ಹಾಳಾದ ಪರಿಣಾಮ ನಮಗೆ ಸಂಭವಿಸಿದ ನಷ್ಟದ ಪರಿಣಾಮ ಸಾಲದ ಹೊರೆ ಹೆಚ್ಚಿದೆ ಹೀಗಾಗಿ ಸರಕಾರ ತಕ್ಷಣ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.