ಲೋಕದರ್ಶನ ವರದಿ
ಯಲ್ಲಾಪುರ: ಇಂದು ಅರಣ್ಯ ನಾಶದ ಕಾರಣ ಜಾಗತಿಕ ತಾಪಮಾನ ಏರುತ್ತಲೇ ಇದೆ. ಇದು ಇಡೀ ವಿಶ್ವದ ಸಮಸ್ಯೆ. ಹೀಗಾಗಿ ಪ್ರತಿಯೊಬ್ಬನೂ ಅರಣ್ಯ ರಕ್ಷಣೆಗೆ ಮುಂದಾಗಬೇಕು' ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ಬುಧವಾರ ಪಟ್ಟಣದ ಅರಣ್ಯ ಇಲಾಖೆಯ ಆವರಣದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಮೊದಲು ಬಯಲು ಸೀಮೆ ಪ್ರದೇಶದ ಮಕ್ಕಳಿಗೆ ಗಿಡಗಳ, ಪರಿಸರದ ಕುರಿತು ತಿಳಿ ಹೇಳುವ ಅಗತ್ಯವಿತ್ತು. ಆದರೆ ಈಗ ಮಲೆನಾಡಿನ ಮಕ್ಕಳಿಗೂ ಪರಿಸರದ ಕುರಿತು ತಿಳಿ ಹೇಳುವ ಪರಿಸ್ಥಿತಿ ಬಂದಿರುವುದು ದುದರ್ೈವ. ಇದಕ್ಕೆ ನಾವೇ ಹೊಣೆಗಾರರಾಗಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಭವ್ಯ ಶೆಟ್ಟಿ ಮಾತನಾಡಿ ನನ್ನ ಉಸಿರನ್ನು ನಾನೇ ಬೆಳೆಸಿಕೊಳ್ಳುತ್ತೇನೆ ಎಂಬ ಭಾವನೆಗೆ ಒತ್ತು ನೀಡಿ ಪ್ರತಿಯೊಬ್ಬನೂ ಕನಿಷ್ಠ ನಾಲ್ಕು ಗಿಡಗಳನ್ನಾದರೂ ಬೆಳೆಸಿ ಎಂದರು.
ಡಿಸಿಎಫ್ ಆರ್.ಜಿ.ಭಟ್ಟ ಮಾತನಾಡಿದರು. ತಹಶೀಲ್ದಾರ್ ಡಿ.ಜಿ.ಹೆಗಡೆ, ಮುರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಸಂಜಯ್ ನಾಯ್ಕ, ಮುಂಡಗೊಸಡು ಎಸಿಎಫ್. ಜಿ.ಆರ್. ಶಶಿಧರ, ಸಾಮಾಜಿಕ ಕಾರ್ಯಕರ್ತರಾದ ವಿಜಯ್ ಮಿರಾಶಿ, ಮಂಜುನಾಥ ರಾಯ್ಕರ್ ವೇದಿಕೆಯಲ್ಲಿದ್ದರು.
ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು,ಎಸಿಎಫ್ ಪ್ರಶಾಂತ.ಪಿ.ಕೆ. ಸ್ವಾಗತಿಸಿದರು. ಗಣೇಶ್ ನಾಯ್ಕ ನಿರೂಪಿಸಿದರು. ಎಸಿಎಫ್. ಅಶೋಕ ಭಟ್ಟ ವಂದಿಸಿದರು. ಅರಣ್ಯ ಇಲಾಖೆಯ ಆವರಣದಲ್ಲಿ ಶಾಸಕ ಹೆಬ್ಬಾರ್ ಬೀಜದುಂಡೆ ಬಿತ್ತಿದರು. ಸಾರ್ವಜನಿಕರಿಗೆ ಗಿಡಗಳನ್ನು ವಿತರಿಸಲಾಯಿತು.