ಹಸಿದವರಿಗೆ ಅನ್ನ ನೀಡುವುದು ನಮ್ಮ ಸಂಸ್ಕೃತಿ : ಮಹಾದೇವ ಯಲಿಗಾರ
ಶಿಗ್ಗಾವಿ : ಹಸಿದಾಗ ಉಣ್ಣುವುದು ಪ್ರಕೃತಿ, ಹಸಿವಿಲ್ಲದೇ ಉಣ್ಣುವುದು ವಿಕೃತಿ, ಹಸಿದವರಿಗೆ ಅನ್ನ ನೀಡುವುದು ನಮ್ಮ ಸಂಸ್ಕೃತಿ ಆದ್ದರಿಂದ ಉತ್ತಮ ಆರೋಗ್ಯಕ್ಕೆ ಮಿತ ಆಹಾರ ಯೋಗ್ಯ ಎಂದು ಹುಬ್ಬಳ್ಳಿ ಪಿ.ಎಸ್.ಐ ಮಹಾದೇವ ಯಲಿಗಾರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ಶ್ರೀ ಎಸ್.ಆರ್.ಜೆ.ವ್ಹಿ.ಜಿ ಸ್ವ ಪ ಪೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ ಉದ್ದೇಶಿಸಿ ಮಾತನಾಡಿದ ಅವರು ನಾವುಗಳೇ ಬೆಳೆದ ಆಹಾರ ದಾನ್ಯಗಳನ್ನು ಸೇವಿಸಿದರೆ ರೋಗಿ ಯೋಗಿಯಾಗಲು ಸಾಧ್ಯ ಎಂದರು. ಉಪನ್ಯಾಸಕ ಬಿ ಡಿ ಸವೂರ ಮಾತನಾಡಿ ದೇಹಕ್ಕೆ ಸಾವಯವ ಕೃಷಿಯಿಂದ ಬೆಳೆದ ಸಿರಿಧಾನ್ಯಗಳ ಸೇವನೆ ಅಮೃತಕ್ಕೆ ಸಮಾನ ಎಂದರು.
ಪ್ರಾಚಾರ್ಯ ಡಾ, ನಾಗರಾಜ ದ್ಯಾಮನಕೊಪ್ಪ ಮಾತನಾಡಿ ಇಂದಿನ ಮಕ್ಕಳು ಬೇಕರೀ ಆಹಾರಕ್ಕೆ ಅಂಟಿಕೊಂಡು ಮಾರಕ ಕಾಯಿಲೆಗಳಿಗೆ ತುತ್ತಾಗುವುದನ್ನು ಗಮನಿಸಿದರೆ ಭವಿಷ್ಯದಲ್ಲಿ ಇನ್ನೂ ಬೇಕರಿ ಆಹಾರ ಮಾನವನ ಜೀವನಕ್ಕೆ ಕಂಟಕವಾಗುತ್ತದೆ ಎಂದು ಎಚ್ಚರಿಸಿದರು. ಪ್ರಾಧ್ಯಾಪಕ ಡಾ. ಆನಂದ ಮಾತನಾಡಿ ಪತಂಂಜಲಿ ಯೋಗದಲ್ಲಿ 84 ಲಕ್ಷ ಯೋಗ ಪ್ರಕಾರಗಳಿದ್ದು, ಎಲ್ಲಕ್ಕಿಂತ ಸೂರ್ಯ ನಮಸ್ಕಾರ ಮಹತ್ವದ ಯೋಗ ಎಂದರು, ಉಪನ್ಯಾಸಕ ಸುರೇಶಗೌಡ್ರ ಪಾಟೀಲ ಮಾತನಾಡಿ ಇಂತಹ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವೂ ವಿದ್ಯಾರ್ಥಿಗಳಲ್ಲಿ ನಾಯಕತ್ವವನ್ನು ಮೂಡಿಸುತ್ತದೆ ಅಲ್ಲದೇ ಮುಖ್ಯವಾಹಿನಿಗೆ ತರಲು ಪ್ರೇರೇಪಿಸುತ್ತದೆ ಎಂದರು. ವೇದ ಮೂರ್ತಿ ಚೆನ್ನಯ್ಯ ಹಿರೇಮಠ ಸಾನಿಧ್ಯವಹಿಸಿದ್ದರು, ಬಸನಗೌಡ ಪಾಟೀಲ ಅಧ್ಯಕ್ಷತೆವಹಿಸಿದ್ದರು. ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಶಿವಯ್ಯ ಪೂಜಾರ ವಂದಿಸಿದರು.ಕುಮಾರಿ ರಾಜೇಶ್ವರಿ ಹೊಸಪೇಟೆ ಮತ್ತು ಸುಜಾತಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.