ಲೋಕದರ್ಶನ ವರದಿ
ಶಿಗ್ಗಾವಿ10: ಪರಿಶ್ರಮ ಯಶಸ್ಸಿನ ಮೆಟ್ಟಿಲು. ಶ್ರಮಿಕರಿಗೆ ಚೈತನ್ಯ ತುಂಬಲು ಅವರೊಂದಿಗೆ ಒಂದು ದಿನ ಸಂತಸದಿಂದ ಕಳೆಯಬೇಕು. ಇದು ಅಭಿವೃದ್ಧಿಗೆ ಪೂರಕ ಎಂದು ಹಿರೇಕೆರೂರಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯ ಯೋಜನಾಧಿಕಾರಿ ಮೋಹನ ನಾಯಕ್ ಹೇಳಿದರು.
ಗೊಟಗೋಡಿ ಉತ್ಸವ ರಾಕ್ ಗಾರ್ಡನ್ನ ಜಾನಪದ ರಂಗಮಂದಿರದಲ್ಲಿ ಶನಿವಾರ ಸಂಜೆ ನಡೆದ ಸ್ನೇಹಕೂಟ ಸಮಾರಂಭವನ್ನು ಉದ್ಘಾಟಿಸಿದರು.
ಸ್ನೇಹಕೂಟ ಎಂದರೆ ಒಗ್ಗಟ್ಟಿನ ಸಂಕೇತ ಇಲ್ಲಿ ಎಲ್ಲರೂ ಒಂದೇ ನಮಗೆ ಗೊತ್ತಿರದ ವಿಷಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರೆ ನಿಗದಿತ ಗುರಿ ತಲುಪಲು ಸಹಕಾರಿ ಆಗುತ್ತದೆ ಅಲ್ಲದೆ ಉತ್ಸವ ರಾಕ್ ಗಾರ್ಡನ್ ಹೆಸರಿಗೆ ತಕ್ಕಂತೆ ಎಲ್ಲರಲ್ಲೂ ಹೊಸ ಚೈತನ್ಯ ತುಂಬುತ್ತದೆ ಎಂದ ಮೋಹನ ನಾಯಕ್,ಇದು ಕಲೆ,ಸಂಸ್ಕೃತಿಯ ಬೀಡು ಎಂದರು.
ರಾಜೇಶ್ ಮಾತನಾಡಿ, ಸ್ನೇಹಕೂಟ ನಾವೆಲ್ಲರೂ ಎಂಬ ಭಾವನೆ ಮೂಡಿಸಿತಲ್ಲದೆ ಹೊಸ ಉತ್ಸವ ತುಂಬಿತು ಎಂದರು.
ಯೋಜನೆಯ ಕಾರ್ಯಕರ್ತರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸ್ನೇಹಕೂಟ ಅಂಗವಾಗಿ ಏರ್ಪಡಿಸಿದ ಕ್ರೀಡಾಕೂಟದ ವಿಜೇತರಿಗೆ ಯೋಜನಾಧಿಕಾರಿ ಮೋಹನ ನಾಯಕ್ ಬಹುಮಾನ ವಿತರಿಸಿದರು.
ಮಮತಾ, ರಟ್ಟಿಹಳ್ಳಿ, ಮಾಸುರು ವಲಯಗಳ ಮೇಲ್ವಿಚಾರಕರು, ಕಾರ್ಯಕರ್ತರು ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ಅಣ್ಣಪ್ಪ ಸ್ವಾಗತಿಸಿದರು. ಮೇಲ್ವಿಚಾರಕ ನಟರಾಜ ವಂದಿಸಿದರು.