ಮಾನವೀಯತೆ ನೀಡುವ ಪದ್ಧತಿ ಅನುಸರಿಸಿ: ಮಠದ

ರಾಣಿಬೆನ್ನೂರ18: ಇಂದಿನ ತಂತ್ರಜ್ಞಾನ ಹಾಗೂ ಆಧುನಿಕತೆಯ ಯುಗದಲ್ಲಿ ಮಕ್ಕಳು ಕಂಠಪಾಠಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇದರೊಂದಿಗೆ ಮಕ್ಕಳಲ್ಲಿ ಸೃಜನಶೀಲ ತರಬೇತಿಯ ಅವಶ್ಯವಿದ್ದು, ಈ ದಿಶೆಯಲ್ಲಿ ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ಪ್ರೇರೆಪಿಸುವ ಜೊತೆಗೆ ಸಂಸ್ಕಾರ ಹಾಗೂ ಮಾನವೀಯತೆಯನ್ನು ನೀಡುವ ಪದ್ದತಿಯನ್ನು ಅನುಸರಿಸಬೇಕು ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಜೆ.ಎಂ.ಮಠದ ಹೇಳಿದರು.

  ಸ್ಥಳೀಯ ಶಿಕ್ಷಕರ ಸಹಕಾರಿ ಸಂಘದಲ್ಲಿ ಬೆಂಗಳೂರು ಮತ್ತು ಹಾವೇರಿಯ ಬಾಲಭವನ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಆಶ್ರಯದಲ್ಲಿ ಎರಡು ದಿನಗಳ ಕಾಲ ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಮಕ್ಕಳ ಮತ್ತು ವಿಜ್ಞಾನ ಹಬ್ಬದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು. 

  ಇಂದಿನ ಶಿಕ್ಷಣದ ವ್ಯವಸ್ಥೆಯಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಉತ್ತೇಜನವು ಸರಕಾರದಿಂದ ದೊರೆಯದಿರುವುದು ವಿಷಾಧದ ಸಂಗತಿಯಾಗಿದೆ. ಇದರಿಂದಾಗಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿರುವ ಕನ್ನಡ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಈ ಬಗ್ಗೆ ಸರಕಾರವು ಗಂಭೀರವಾಗಿ ಯೋಚಿಸಬೇಕಾಗಿದೆ ಎಂದರು.

  ಸಂಪನ್ಮೂಲ ವ್ಯಕ್ತಿ ಜಿ.ಜಿ.ಮಾಳದಕರ ರಸದಿಂದ ಕಸ, ಶಿಕ್ಷಕ ಇಸ್ಮಾಯಿಲ್ ಐರಣಿಯವರು ಸಾಂಸ್ಕೃತಿಕ, ಬಿ.ಎನ್.ಲಕ್ಷ್ಮಣ ಮೂಡನಂಬಿಕೆ ಹಾಗೂ ಕೈಚಳಕದ ತರಬೇತಿ ಮತ್ತು ನೀಲಕಂಠಪ್ಪ ಶೆಟ್ಟಿಕೇರಿ ಕಾಗದದ ಕಲೆ ಕುರಿತು ತರಬೇತಿ ನೀಡಿದರು. ರೇಣುಕಾ ಗುಡಿಮನಿ, ಕೋಮಲಾಕರ ಮರಡೇರ, ಶೋಬಾ ತಾಯಿ ಹುಲ್ಮನಿ, ಪಿ.ಎನ್.ಹೊಸಮನಿ, ಎಲ್.ಎಚ್.ಸಾವಂತಲವರ ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಕಿರಿಯ ಅಧಿಕಾರಿಗಳು ಇದ್ದರು.