ವಾಲಗಳ್ಳಿಯಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಹಬ್ಬಗುಳು ಆಚರಣೆ

ಲೋಕದರ್ಶನ ವರದಿ

ಕುಮಟಾ, 9 : ಬೆಳಕಿನ ಹಬ್ಬವಾದ ದೀಪಾವಳಿ ನಿಮಿತ್ತ ಕುಮಟಾ ತಾಲೂಕಿನ ವಾಲಗಳ್ಳಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ನಡೆದ ಹಬ್ಬಗುಳು ಆಚರಣೆ ವಿಶೇಷವಾಗಿದ್ದು, ವಾಲಗಳ್ಳಿಯ ಮುಖ್ಯ ರಸ್ತೆಯಲ್ಲಿ ಕಟ್ಟಿರುವ ಫಲಾವಳಿ ನೋಡುಗರ ಗಮನ ಸೆಳೆಯುತ್ತಿದೆ.

ತಾಲೂಕಿನ ವಾಲಗಳ್ಳಿ ಗ್ರಾಮದಲ್ಲಿ ನೆಲೆಸಿರುವ ಕಾಂಚಿಕಾ ಪರಮೇಶ್ವರಿ ಮತ್ತು ಕನ್ನಿಕಾ ಪರಮೇಶ್ವರಿ ದೇವಸ್ಥಾನದ ವತಿಯಿಂದ ಪ್ರತಿವರ್ಷವು ಈ ಹಬ್ಬಗುಳು ಆಚರಣೆ ನಡೆಸಲಾಗುತ್ತದೆ. ಕನ್ನಿಕಾ ಪರಮೇಶ್ವರಿ ಹಾಗೂ ಕಾಂಚಿಕಾ ಪರಮೇಶ್ವರಿ ಇವರಿಬ್ಬರು ಸಹೋದರಿಯಾಗಿರುವುದರಿಂದ ಒಂದು ವರ್ಷ ಕನ್ನಿಕಾ ಪರಮೇಶ್ವರಿ ಹಾಗೂ ಇನ್ನೊಂದು ವರ್ಷ ಕಾಂಚಿಕಾ ಪರಮೇಶ್ವರಿ ದೇವಸ್ಥಾನದ ಅಭಿವೃದ್ಧಿಗೆ ಈ ಹಬ್ಬಗುಳುವಿನ ಹರಾಜಿನಿಂದ ಬಂದಂತಹ ಆದಾಯವನ್ನು ಕ್ರಮವಾಗಿ ಬಳಸಿಕೊಳ್ಳಲಾಗುತ್ತದೆ.

ವಾಲಗಳ್ಳಿ ಕಲಕೇರಿ ಹಾಗೂ ಹಾರೋಡಿ ಗ್ರಾಮಸ್ಥರು ಹಬ್ಬದ 2ನೇ ದಿನದಂದು ಆ ಗ್ರಾಮದ ಎಲ್ಲ ಮನೆಗಳಿಗೆ ತೆರಳಿ ಅಡಿಕೆ, ಅಕ್ಕಿ, ತೆಂಗಿನಕಾಯಿ, ಬಾಳೆಗೊನೆ ಹಾಗೂ ಇತರೆ ಹಣ್ಣುಗಳನ್ನು ಕಾಣಿಕೆ ರೂಪದಲ್ಲಿ ಪಡೆಯುತ್ತಾರೆ. ಬಳಿಕ ಆ ಸಾಮಗ್ರಿಗಳನ್ನು ವಾಲಗಳ್ಳಿಯ ಮುಖ್ಯ ರಸ್ತೆಯಲ್ಲಿ ಫಲಾವಳಿ ಕಟ್ಟುತ್ತಾರೆ. ಒಂದು ವರ್ಷ ವಾಲಗಳ್ಳಿಯ ಮುಖ್ಯ ರಸ್ತೆಯ ಪ್ರಧಾನ ದ್ವಾರದ ಬಳಿ ಹಾಗೂ ಇನ್ನೊಂದು ವರ್ಷ ವಾಲಗಳ್ಳಿಯ ಹಿರಿಯ ಪ್ರಾಥಮಿಕ ಶಾಲೆ ಕ್ರಾಸ್ ಮುಖ್ಯ ರಸ್ತೆಯಲ್ಲಿ ಕಟ್ಟುತ್ತಾರೆ. ಗೋ ಪೂಜೆಯ ಮಾರನೇ ದಿನ ಫಲಾವಳಿಗಳನ್ನು ಸವಾಲು ಕರೆಯುತ್ತಾರೆ. ಅದರಿಂದ ಸಂಗ್ರಹವಾದ ಹಣವನ್ನು ದೇವಸ್ಥಾನದ ಜೀಣರ್ೊದ್ದಾರಕ್ಕೆ ಬಳಸಿಕೊಳ್ಳುವ ಪ್ರತೀತಿ ಇದೆ.

ದಶಕಗಳ ಹಿಂದೆ ಫಲಾವಳಿ ಸಾಮಗ್ರಿಗಳಿಗಾಗಿ ಕಳವು ಮಾಡುವ ಸಂಪ್ರದಾಯವಿತ್ತು. ಈಗ ಕಳವು ಮಾಡುವುದನ್ನು ನಿಷೇಧಿಸಿರುವುದರಿಂದ ಮನೆ ಮನೆಗೆ ತೆರಳಿ ಕಾಣಿಕೆ ಸಂಗ್ರಹಿಸಲಾಗುತ್ತಿದೆ. ಈ ವರ್ಷ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ವತಿಯಿಂದ ಹಬ್ಬಗುಳು ಆಚರಣೆ ನಡೆದಿದೆ. ಈ ಫಲಾವಳಿಗಳನ್ನು ಗ್ರಾಮದ ವಾಲಗಳ್ಳಿಯ ಮುಖ್ಯ ರಸ್ತೆಯಲ್ಲಿ ಕಟ್ಟಿರುವುದು ನೋಡುಗರನ್ನು ಆಕಷರ್ಿಸುತ್ತಿದೆ.