ಗಮನಸೆಳೆದ ವಿಜ್ಞಾನ, ಗಣಿತ ವಸ್ತು ಪ್ರದರ್ಶನ.
ಚಿಮ್ಮಡ, 08; ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನ ಹಾಗೂ ವಿಜ್ಞಾನ ರಂಗೋಲಿ ಸ್ಪರ್ದೆಗಳು ಯಶಸ್ವಿಯಾಗಿ ನಡೆದವು. ಜಿಲ್ಲಾ ಪಂಚಾಯತಿ ಬಾಗಲಕೋಟೆ, ಕ್ಷೇತ್ರ ಶೀಕ್ಷಣಾಧಿಕಾರಿಗಳ ಕಾರ್ಯಾಲಯ ಜಮಖಂಡಿ ಹಾಗೂ ಚಿಮ್ಮಡ ಸರಕಾರಿ ಪ್ರೌಢಶಾಲೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಜಲ, ವಾಯೂ ಮತ್ತು ಪರಿಸರ ಮಾಲಿನ್ಯದ, ಹನಿ ನೀರಾವರಿ, ಪ್ರಾಣಿ ವ್ಯೂಹ, ಸೌರ ವ್ಯೂಹ, ರಾಕೆಟ್ ವುಡಾವಣೆ, ಮಾದರಿ ಮನೆ, ಮಳೆ ನೀರು ಕೊಯ್ಲು, ಮನುಷ್ಯನ ಅಂಗಗಳ ಕುರಿತು ವೈಜ್ಞಾನಿಕವಾಗಿ ನೈಜ ಚಿತ್ರಗಳ ಮೂಲಕ ಮಾಹಿತಿ ನೀಡುವ ಸ್ಟಾಲ್ಗಳನ್ನು ನಿರ್ಮಿಸಲಾಗಿತ್ತು, ಅಲ್ಲದೇ ಕಾರ್ಯಕ್ರಮದ ವಿಶೇಷವಾಗಿದ್ದ ವಿಜ್ಞಾನ ರಂಗೋಲಿ ಸ್ಪರ್ದೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಹಲವು ವೈವಿದ್ಯಗಳನ್ನು ರಂಗೋಲಿಯ ಮೂಲಕ ಪ್ರಸ್ತುತಪಡಿಸಿದ್ದರು. ರಾಷ್ಟ್ರೀಯ ಆವಿಷ್ಕಾರ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಜ್ಞಾನ, ಗಣಿತ ಮತ್ತು ತಂತ್ರಕ್ಞಾನ ಆಧರಿತ ವಸ್ತು ಪ್ರದರ್ಶನವನ್ನು ಈ ಭಾಗದ ಹಲವು ಶಾಲೆಗಳ ಮುಖ್ಯೋಪಾದ್ಯಾಯರು, ಶಿಕ್ಷಕರು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರೌಢಶಾಲೆಗೆ ಭೇಟೀನೀಡಿ ಪ್ರದರ್ಶನವನ್ನು ವೀಕ್ಷಣೆ ಮಾಡಿದರು. ಮಾದರಿ ತಯಾರಿಸಿದ ವಿದ್ಯಾರ್ಥಿಗಳು ಅವುಗಳ ವಿವರಣೆಯನ್ನು ವಿದ್ಯಾರ್ಥಿಗಳ ಮನಮುಟ್ಟುವಂತೆ ತಿಳಿಸಿದರು. ಕಾರ್ಯಕ್ರಮದ ಉದ್ಘಾಟಣೆಯನ್ನು ತಾ.ಪಂ. ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ ನೆರವೇರಿಸಿದರು. ಸಿಆರ್ಪಿ ಸಮನ್ವಯ ಅಧಿಕಾರಿ ದ್ರಾಕ್ಷಾಯಿಣಿ ಮಂಡಿ, ಎಸ್ಡಿಎಂಸಿ ಅಧ್ಯಕ್ಷ ಮಾರುತಿ ಮಮದಾಪೂರ, ಮುಖ್ಯೋಪಾದ್ಯಾಯೆ ಶ್ರೀಮತಿ ಎಂ.ಎಸ್. ಜಿಟ್ಟಿ, ಇಲಾಹಿ ಜಮಖಂಡಿ, ವಿಜ್ಞಾನ ಶಿಕ್ಷಕರಾದ ಪಿ.ಬಿ. ಮುಧೋಳ ಸೇರಿದಂತೆ ಸಹ ಶಿಕ್ಷಕರು ಉಪಸ್ಥಿತರಿದ್ದರು.