ಸಹಕಾರ ಸಂಘಗಳ ಜಾಗೃತಿ ಸಮಾವೇಶ ಪ್ರಾಥಮಿಕ ಹಂತದ ಶಿಕ್ಷಣದಲ್ಲಿಯೇ ಸಹಕಾರಿ ಆಂದೋಲನದ ಮಾಹಿತಿ ತಿಳಿಸಬೇಕು - ಸಹಕಾರ ಸಚಿವ ಕೆ.ಎನ್.ರಾಜಣ್ಣ
ಕೊಪ್ಪಳ 08: ಸಹಕಾರಿ ಕ್ಷೇತ್ರದಲ್ಲಿ ಯುವ ಸಮುದಾಯದ ಮುಂದೆ ಬರುತ್ತಿಲ್ಲ. ಪ್ರಾಥಮಿಕ ಹಂತದ ಶಿಕ್ಷಣ ವ್ಯವಸ್ಥೆಯಲ್ಲಿಯೇ ಸಹಕಾರಿ ಆಂದೋಲನಗಳ ಮಾಹಿತಿ ತಿಳಿಸುವಂತಾಗಬೇಕು ಎಂದು ಕರ್ನಾಟಕ ಸರ್ಕಾರದ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಹೇಳಿದರು.
ಅವರು ಶನಿವಾರ ಕುಕನೂರಿನ ಎ.ಪಿ.ಎಂ.ಸಿ ಆವರಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಬೆಂಗಳೂರು, ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ, ಕೊಪ್ಪಳ ಜಿಲ್ಲಾ ಸಹಕಾರಿ ಯೂನಿಯನ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಸಹಕಾರ ಇಲಾಖೆ ಹಾಗೂ ಕುಕುನೂರು ಮತ್ತು ಯಲಬುರ್ಗಾ ತಾಲ್ಲೂಕಿನ ವಿವಿಧ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ, ಸಹಕಾರ ಜಾಗೃತಿ ಸಮಾವೇಶದಲ್ಲಿ ಸಹಕಾರಿ ಪಿತಾಮಹ ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲ್ ರವರ ಭಾವಚಿತ್ರಕ್ಕೆ ಪುಷ್ಪಾಚರಣೆ ಮಾಡಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಪಂಚದಲ್ಲಿ ್ರ್ರಥಮವಾಗಿ ಪತ್ತಿನ ವ್ಯವಸ್ಥೆಯನ್ನು ಪ್ರಾರಂಭಿಸಿದ ಹೆಗ್ಗಳಿಕೆ ಸಹಕಾರಿ ಪಿತಾಮಹ ಸಿದ್ದನಗೌಡ ಪಾಟೀಲರದ್ದು. ಈ ಪತ್ತಿನ ಸಂಸ್ಥೆ 1904 ರಲ್ಲಿ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ಆರಂಭವಾಯಿತು. ಯುವಕರು, ಮಹಿಳೆಯರು ಸಹಕಾರಿಗಳಾಗಲು ಮುಂದೆ ಬರಬೇಕು. ಸಹಕಾರಿ ಆಂದೋಲನ ಯಾವ ರೀತಿ ನಡೆಯುತ್ತದೆ, ಅದನ್ನು ಯಾವ ರೀತಿ ನಡೆಸಿಕೊಂಡು ಹೋಗಬೇಕು ಹಾಗೂ ಅದರಿಂದ ರೈತರಿಗೆ ಏನೆಲ್ಲಾ ಅನುಕೂಲವಾಗುತ್ತದೆ. ಎಂಬುವುದನ್ನಾದರು ಪಠ್ಯ ಪುಸ್ತಕಗಳಲ್ಲಿ ಒಂದು ಪಾಠದಲ್ಲಿ ಅಳವಡಿಸಿ ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕು. ಸಹಕಾರಿ ಸಂಸ್ಥೆಗಳು ಪ್ರತಿ ಗ್ರಾಮಕ್ಕೊಂದು ಇರಬೇಕು ಎಂದರು.
ರಾಜ್ಯದಲ್ಲಿ ಸುಮಾರು 46 ರಿಂದ 47 ಸಾವಿರ ಸಹಕಾರಿ ಸಂಸ್ಥೆಗಳಿವೆ. ಇದರಲ್ಲಿ 26 ಸಾವಿರ ಸಹಕಾರಿ ಸಂಸ್ಥಗಳು ಮಾತ್ರ ಲಾಭದಲ್ಲಿವೆ. ಸಾಮಾನ್ಯವಾಗಿ ವಾಣಿಜ್ಯ ಬ್ಯಾಂಕುಗಳಲ್ಲಿ ಹೂಡಿಕೆ, ಸಹಕಾರಿ ಸಂಸ್ಥೆಗಳಲ್ಲಿ ಸಾಲ ಪಡೆಯಲಾಗುತ್ತದೆ. ನಮ್ಮ ಹೂಡಿಕೆಯೂ ಸಹಕಾರಿ ಸಂಸ್ಥೆಗಳಲ್ಲಿ ಮಾಡಿದಾಗ ಮಾತ್ರ, ಸಹಕಾರಿ ಕ್ಷೇತ್ರ ಬೆಳೆಯುತ್ತದೆ. ರೈತರಿಗೆ ಸಹಕಾರಿ ಸಂಸ್ಥೆಗಳಲ್ಲಿಯೇ ಎಲ್ಲಾ ಸೌಲಭ್ಯಗಳು ಸಿಗುವಂತಾಗಬೇಕು. ರೈತರು ಉತ್ಪಾದಿಸುವ ವಸ್ತುಗಳಿಗೆ ರೈತರೇ ಬೆಲೆ ನಿಗದಿಪಡಿಸುವಂತಾಗಬೇಕು. ರೈತರು ಕೃಷಿ ಜೊತೆಗೆ ಕುಲ ಕಸುಬುಗಳಿಗೂ ಆದ್ಯತೆ ನೀಡಬೇಕು. ಸಹಕಾರಿಗಳನ್ನು ಒಗ್ಗೂಡಿಸುವ ಜೊತೆಗೆ ಎಲ್ಲರ ಜವಾಬ್ದಾರಿಯನ್ನು ನೆನಪಿಸುವಂತಹ ಸಮಾವೇಶ ಇದಾಗಿದೆ. ಸಹಕಾರ ಸಂಘಗಳ ಅಧ್ಯಕ್ಷರು ಆಯಾ ಗ್ರಾಮ ಪಂಚಾಯತ್ ಸದನಗಳಲ್ಲಿ ಭಾಗವಹಿಸುವುದು ಮತ್ತು ಗ್ರಾ.ಪಂ ಸದಸ್ಯರಾಗಿ ಬರುವ ರೀಯಿಲ್ಲಿ ತಿದ್ದುಪಡಿಯನ್ನು ತರಲು ಪ್ರಯತ್ನವನ್ನು ಮಾಡುತ್ತವೆ. ಸಹಕಾರಿ ಸಂಸ್ಥೆಗಳು, ಜನ ಸಂಸ್ಥೆಗಳು ಹಾಗೂ ಸಹಕಾರಿ ಆಂದೋಲನಗಳು ಜನರ ಆಂದೋಲನಗಳಾಗಿದ್ದು, ಎಲ್ಲರ ಒಗ್ಗೂಡುವಿಕೆಯಿಂದ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಆಶಯದಂತೆ ಸಹಕಾರಿ ಸಂಸ್ಥೆಗಳು ನಡೆಯುತ್ತಿವೆ ಎಂದು ಹೇಳಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗಳೂ ಸಹಕಾರಿ ಕ್ಷೇತ್ರದಲ್ಲಿ ಬರಬೇಕು. ಈ ದಿಶೆಯಲ್ಲಿ ಮೀಸಲಾತಿ ತರುವುದು ಮತ್ತು ನಾಮನಿರ್ದೇಶನಕ್ಕಾಗಿ ತಿದ್ದುಪಡಿಗಳನ್ನು ವಿಧಾನಮಂಡಳದಲ್ಲಿ ಮಂಜೂರು ಮಾಡಿ, ಗೌರವಾನ್ವಿತ ರಾಜ್ಯಪಾಲರಿಗೆ ಸಲ್ಲಿಸಿದ್ದೇವೆ. ಈ ಬಗ್ಗೆ ಅವರು ಕೆಲವು ವಿಚಾರಗಳ ಬಗ್ಗೆ ಹಿಚ್ಚಿನ ಮಾಹಿತಿಯನ್ನು ಕೇಳಿದ್ದು, ಅದನ್ನು ಸಹ ಸಲ್ಲಿಸಿದ್ದೇವೆ. ಒಂದು ವೇಳೆ ಇದಕ್ಕೆ ಅನುಮೊಧನೆಯ ದೊರೆಯದೇ ಇದ್ದಲ್ಲಿ, ಮತ್ತೊಮ್ಮೆ ವಿಧೆಯಕವನ್ನು ಮಂಡನೆ ಮಾಡಿ ಸಲ್ಲಿಸುತ್ತೇವೆ. ಇದಕ್ಕೆ ನಮ್ಮ ಸರ್ಕಾರ ಕ್ರಮ ಕೈಗೊಳ್ಳಲಿದೆ. ಇತ್ತೀಚೆಗೆ ಖಾಸಗಿ ಮತ್ತು ಅನಧೀಕೃತ ಲೆವಾದೇವಿದಾರ ವಸೂಲಾತಿ ತಬ್ಬಾಳಿಕೆ ಹಿನ್ನೆಲೆಯಲ್ಲಿ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇವೆ. ಈ ಬಗ್ಗೆ ಸುಗೀವಾಜ್ಞೆ ಮಾಡಬೇಕೆಂದು ಈಗಾಗಲೇ ಸರ್ಕಾರವು ತೀರ್ಮಾನ ಮಾಡಿದೆ. ಇಂತಹ ಆತ್ಮಹತ್ಯೆ ಪ್ರಕರಣಗಳು ಕಂಡುಬಂದರೆ, ಈಗಿರುವ ಕಾನೂನಿನಲ್ಲಿಯೇ ಪ್ರಕರಣ ದಾಖಲಿಸಿ ತಪ್ಪಿತಸ್ಥರಿಗೆ ಶಿಕಲ್ಷೆ ನೀಡಲು ಅವಕಾಶವಿದ್ದು, ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಆರ್.ಡಿ.ಸಿ.ಸಿ ಬ್ಯಾಂಕಿನ ಕೇಂದ್ರ ಶಾಖೆಯನ್ನು ಕೊಪ್ಪಳ ಜಿಲ್ಲೆಗೆ ಬದಲಿಸುವ ಕುರಿತಂತೆ, ಈ ಬಗ್ಗೆ ಕಾರ್ಯಸಾಧ್ಯತಾ ಪಟ್ಟಿ ತಯಾರಿಸಿ, ಆರ್.ಬಿ.ಐ.ಗೆ ಸಲ್ಲಿಸಲು ಕ್ರಮ ವಹಿಸಲಾಗುವುದು ಎಂದರು.
ಸಹಕಾರಿ ಸಂಸ್ಥೆಗಳ ಸದಸ್ಯರು, ಕನಿಷ್ಠ ವ್ಯವಹಾರವನ್ನು ನಡೆಸಬೇಕು. ಕನಿಷ್ಠ ವ್ಯವಹಾರ ಮಾಡುವವರಿಗೆ ಮತದಾನ ಮಾಡುವ ಹಕ್ಕನ್ನು ನೀಡುವ ಕೆಲವನ್ನು ಮಾಡಿದ್ದೇವೆ. ಅಸಹಾಯಕನಿಗೆ ತ್ವರಿತವಾಗಿ ಸಹಾಯ ಮಾಡುವಂತಹ ಸಂಸ್ಥೆಗಳು ಸಹಕಾರಿ ಸಂಸ್ಥೆಗಳಾಗಿವೆ. ಸಂಸ್ಥೆಗಳಿಂದ ಪಡೆಯುವ ಸಾಲ ಮರು ಪಾವತಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಹಕಾರಿಗಳನ್ನು ಜಾಗೃತಿ ಮೂಡಿಸಲು ಕಮ್ಮಿಕೊಂಡಿರುವ ಇಂತಹ ಸಹಕಾರ ಜಾಗೃತಿ ಸಮಾವೇಶ ಹೆಚ್ಚು-ಹೆಚ್ಚಾಗಿ ನಡೆಯಬೇಕು. ಇಂದಹ ಸಮ್ಮೇಳನಗಳು ಪ್ರತಿ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿಯೂ ನಡೆಯಬೇಕು. ಕುಕನೂರಿನ ಸಹಕಾರಿ ಜಾಗೃತಿ ಸಮಾವೇಶದ ನಿರ್ಣಯಗಳನ್ನು ಜಾರಿ ಮಾಡುವಂತ ಕೆಲಸವನ್ನು ನಾವು ಮಾಡುತ್ತೇವೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್ ತಂಗಡಗಿ ಅವರು ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಸಹಕಾರ ಜಾಗೃತಿ ಸಮಾವೇಶ ಬಹಳ ವಿಶಿಷ್ಟವಾದದ್ದು, ಈ ಸಹಕಾರ ರಂಗ ಬೆಳಕು ಆಗಿದ್ದು, ಅದು ಬೆಳೆದಾಗ ಮಾತ್ರ ರೈತರು ನೆಮ್ಮದಿಯಿಂದ ಇರಲು ಸಾಧ್ಯ, ಪ್ರತಿಯೊಂದು ಗ್ರಾಮದಲ್ಲಿ ಸಹಕಾರ ಸಂಘ ಇರಬೇಕು. ಸರ್ಕಾರ ಬಹಳ ಸೌಲಭ್ಯ ಕೊಡುತ್ತಿದೆ. ಅವುಗಳನ್ನ ಉಪಯೋಗ ಮಾಡಬೇಕು ಅಂದ್ರೆ, ಸಹಕಾರ ಸಂಘ ಬೆಳೆಯಬೇಕು. ಸಹಕಾರ ರಂಗ ಬೆಳೆಯಲು ಎಲ್ಲರ ಸಹಕಾರ ಬಹಳ ಮುಖ್ಯವಾಗಿದೆ. ಇಲ್ಲಿನ ಜನರಿಗೆ ಮಾಹಿಯ ಕೊರತೆ ಹೆಚ್ಚಾಗಿದ್ದು, ವ್ಯವಹಾರ ಮಾಡಲು ತೊಂದರೆಯಾಗುತ್ತಿದೆ. ಅದಕ್ಕಾಗಿ ರಾಯಚೂರು-ಕೊಪ್ಪಳ ನಡುವೆ ಇರುವ ಒಂದೇ ಆರ್.ಡಿ.ಸಿ.ಸಿ.ಬ್ಯಾಂಕ್ ಇರುವುದರಿಂದ ಅದನ್ನ ವಿಭಜಿಸಿ ಕೊಪ್ಪಳಕ್ಕೆ ಪ್ರತ್ಯೇಕವಾಗಿ ಆರ್.ಡಿ.ಸಿ.ಸಿ. ಬ್ಯಾಂಕನ್ನು ಕೊಡಬೇಕು ಎಂದರು.
ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರವಾದ ಎಚ್.ಕೆ.ಪಾಟೀಲ ಅವರು ಸಹಕಾರ ವಾರಪತ್ರಿಕೆ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಕಣಗಿನಹಾಳ ಗ್ರಾಮದಲ್ಲಿ ಮೊದಲ ಸಹಕಾರಿ ಸೊಸೈಟಿ ಪ್ರಾರಂಭವಾಯಿತು. ಆ ನಂತರ ಹಲವಾರು ಸಹಕಾರಿಗಳು ಇದರ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಇಂದಿನ ಯುವಕರು ಸಹಕಾರ ಕ್ಷೇತ್ರಕ್ಕೆ ಬರಲು ಹಿಂದೆಟು ಹಾಕುತ್ತಿದ್ದಾರೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಮಾತನಾಡಿ, ಇದು ಒಂದು ಐತಿಹಾಸಿಕ ಜಾಗೃತಿ ಸಮಾವೇಶ. ಇತರೆ ವಿಷಯಗಳ ಸಮಾವೇಶಗಳಾಗ್ತಾ ಇದ್ದವು. ಸಹಕಾರಿ ಕ್ಷೇತ್ರದ ಅಭಿವೃದ್ಧಿಗಾಗಿ ಈ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಮುಂಬೈ ಕರ್ನಾಟಕ ಭಾಗದಲ್ಲಿ ಅದಷ್ಟು ಸಹಕಾರಿ ಜಾಗೃತಿ ನಮ್ಮ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಅಷ್ಟು ಜಾಗೃತಿ ಆಗಿಲ್ಲ. ಈ ದಿಶೇಯಲ್ಲಿ ಕುಕನೂರಿನಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ರಾಜ್ಯದಲ್ಲೆ ಮೊದಲು ಕಣಗಿನಹಾಳ ಗ್ರಾಮದಲ್ಲಿ ಪ್ರಾಥಮಿಕ ವ್ಯವಸಾಯ ಸಹಕಾರಿ ಸಂಘವನ್ನು ಸ್ಥಾಪಿಸಿ ಕ್ರಾಂತಿಯನ್ನ ಮಾಡಿದ ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲ ಅವರು, ಜನರಿಗೆ ಸಹಕಾರಿ ಸಂಘಗಳ ಬಗ್ಗೆ ಅರಿವನ್ನ ಮುಡಿಸುವ ಪ್ರಯತ್ನ ಮಾಡಿದ್ದಾರೆ ಎಂದರು.
ಸನ್ಮಾನ: ಸಕಾರ ಕ್ಷೇತ್ರದಲ್ಲಿ ಶ್ರಮಿಸಿದ ಮಾಜಿ ಸಚಿವರಾದ ಎಸ್.ಎಸ್.ಪಾಟೀಲ್, ಹಿರಿಯ ಸಹಕಾರಿಗಳಾದ ರಾಘವೇಂದ್ರಚಾರ್ಯ ಜೋಶಿ, ಶಿದ್ದನಗೌಡ ಹೊರಪೇಟೆ, ಶ್ರೀಪಾದಪ್ಪ ಅಧಿಕಾರಿ, ಯಂಕಣ್ಣ ಯರಾಶಿ, ಕೆರಿಬಸಪ್ಪ ನಿಡಗುಂದಿ, ಬಸವರಾಜ ಉಳ್ಳಾಗಡ್ಡಿ, ಬಿ.ಎಮ್.ಶಿರೂರ ಅವರಿಗೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಹಿಟ್ನಾಳ, ಮುನಿರಾಬಾದ್ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ತುಂಗಭದ್ರಾ ಯೋಜನೆಯ ಅಧ್ಯಕ್ಷರಾದ ಹಸನಸಾಬ ನಭಿಸಾಬ ದೋಟಿಹಾಳ, ಮಾಜಿ ಸಚಿವರು ಕರ್ನಾಟಕ ರಾಜ್ಯ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳದ ಅಧ್ಯಕ್ಷರಾದ ವೆಂಕಟರಾವ್ ನಾಡಗೌಡ, ಮಾಜಿ ಸಚಿವರಾದ ಅಮರೇಗೌಡ ಪಾಟೀಲ್ ಬಯ್ಯಾಪುರ, ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ವಿಶ್ವನಾಥ ಪಾಟೀಲ ತೋರಣದಿನ್ನಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾದ ಶಿವಶಂಕರಗೌಡ ಪಾಟೀಲ್, ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೆಶಕರಾದ ಶೇಖರಗೌಡ ವಿ. ಮಾಲಿಪಾಟೀಲ, ರಾಯಚೂರು ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಸುರೇಶರಡ್ಡಿ ಮಾದಿನೂರು, ಕೊಪ್ಪಳ ಮತ್ತು ಬಳ್ಳಾರಿ ಕಾಸ್ಕಾರ್ಡ ಬ್ಯಾಂಕಿನ ನಿರ್ದೇಶಕರಾದ ವೃಷಬೇಂದ್ರಯ್ಯ ಜೆ.ಎಮ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಕುಮಾರ್, ಕೊಪ್ಪಳ ಸಹಕಾರ ಸಂಘಗಳ ಉಪನಿಬಂಧಕ ಸಜ್ಜನರ ಪ್ರಕಾಶ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಹಾಗೂ ಸಹಕಾರ ಇಲಾಖೆ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.