ಲೋಕದರ್ಶನ ವರದಿ
ಕಂಪ್ಲಿ:ನ.28. ತುಂಗಭದ್ರ ಜಲಾಶಯದಲ್ಲಿರುವ ನೀರಿನ ಮಟ್ಟದ ಆಧಾರದ ಮೇಲೆ ತುಂಗಭದ್ರ ಅಚ್ಚುಕಟ್ಟು ಪ್ರದೇಶದ ರೈತರು ಮಿತ ನೀರಾವರಿ ಬೆಳೆಯಲು ಜಾಗೃತಿವಹಿಸಬೇಕಾಗಿದೆ ಎಂದು ತುಂಗಭದ್ರಾ ಜಲಾಶಯ ಮಂಡಳಿಯ ಎಲ್ಎಲ್ಸಿ ಕಾಲುವೆ ವಿಭಾಗದ ಬಳ್ಳಾರಿಯ ಇಇ ವಿಶ್ವನಾಥರೆಡ್ಡಿ ಹೇಳಿದರು.
ತಾಲೂಕಿನ ಅತಿಥಿಗೃಹ ಆವರಣದಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷದಲ್ಲಿ 59.56 ಟಿಎಂಸಿ ನೀರಿತ್ತು. ಆದರೆ, ಪ್ರಸಕ್ತ ವರ್ಷದ ಜುಲೈ-18ರಂದು ತುಂಗಭದ್ರ ಜಲಾಶಯ ತುಂಬಿ, ಸಾಕಷ್ಟು ನೀರು ನದಿಗೆ ಹರಿದು ಹೋಗಿದೆ. ಇದರಿಂದ ಜಲಾಶಯ ನೀರಿನ ಸಂಗ್ರಹ ಕಡಿಮೆಯಾಗಿದೆ. ನ.28ರಂದು 47.37ಟಿಎಂಸಿಯಷ್ಟು ನೀರಿದೆ. ಸುಗ್ಗಿ ಬೆಳೆಗಾಗಿ ಎಲ್ಎಲ್ಸಿ ಕಾಲುವೆ ಮೂಲಕ ಈವರೆಗೆ 9ಟಿಎಂಸಿಯಷ್ಟು ನೀರು ಉಪಯೋಗಿಸಲಾಗಿದೆ.
ಹೀಗಾಗಿ ಎರಡನೆ ಬೆಳೆಗೂ 9 ಟಿಎಂಸಿ ನೀರು ಅವಶ್ಯಕತೆಯಿದೆ. ಅಲ್ಲದೆ, 2019ರ ಜ.19ರತನಕ ರಾಯಚೂರು ಎಡದಂಡೆ ಕಾಲುವೆ ಭಾಗದಲ್ಲಿ ಬೆಳೆದ ನಿಂತ ಬೆಳೆಗೆ ನಿತ್ಯ 2700ಕ್ಯೂಸೆಕ್ಸ್ನಂತೆ 12ಟಿಎಂಸಿಯಷ್ಟು ನೀರು ಹಾಯಿಸಬೇಕಾಗಿದೆ. ಮತ್ತು 3ಟಿಎಂಸಿ ನೀರನ್ನು ಕುಡಿಯುವ ಸಲುವಾಗಿ ಮೀಸಲಿಡಬೇಕು. ಅದ್ದರಿಂದ ಜಲಾಶಯದಲ್ಲಿರುವ ನೀರಿನ ಪ್ರಮಾಣದ ಆಧಾರದ ಮೇಲೆ ಕಾಲುವೆಗೆ ನೀರು ಹಾಯಿಸಬೇಕಾಗಿದೆ. ಪಂಪ್ಸೆಟ್, ಸೈಫನಿಂಗ್ ಪೈಪುಗಳ ಮೂಲಕ ನಾನ್ ಆಯಕಟ್ಟು ಜಮೀನುಗಳಿಗೆ ಅನಧಿಕೃತವಾಗಿ ನೀರು ಹಾಯಿಸಿಕೊಳ್ಳಬಾರದು. ಅದಕ್ಕಾಗಿ ನೀರಿನ ನಿರ್ವಹಣೆಯಲ್ಲಿ ಇಲಾಖೆಗೆ ರೈತರು ಸಹಕರಿಸಬೇಕು. ನೀರು ಲಭ್ಯತೆ ಆಧಾರದ ಮೇಲೆ ಕಾಲುವೆಗೆ ನೀರು ಬಿಡಬೇಕಾಗುತ್ತದೆ. ರೈತರು ಮಿತ ನೀರಾವರಿ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್ಡಿಒ ರಾಮಕೃಷ್ಣ, ಸುಂದರವಡಿವೇಲು, ಪಾಂಡುರಂಗರೆಡ್ಡಿ, ರವಿಕುಮಾರ್ ಇದ್ದರು