ಮನುಷ್ಯನ ದುರಾಸೆಯಿಂದಲೇ ನಾಶವಾಗುತ್ತಿದೆ ಪರಿಸರ: ಕಾಗಣಿಕರ್
ಬೆಳಗಾವಿ 15: ಮನುಷ್ಯನ ಅತಿಯಾದ ದುರಾಸೆಯಿಂದಲೇ ಇಂದು ಪರಿಸರ ನಾಶವಾಗುತ್ತಿದೆ. ಹೀಗಾಗಿ ಹವಾಮಾನದಲ್ಲಿ ಬದಲಾವಣೆಯನ್ನು ಕಾಣುತ್ತಿದ್ದೇವೆ, ಆದ್ದರಿಂದ ಪರಿಸರ ರಕ್ಷಣೆ ಮಾಡುವ ಕಾಳಜಿಯನ್ನು ನಿವೇಲ್ಲರೂ ಬೆಳಸಿಕೊಳ್ಳಬೇಕಿದೆ ಎಂದು ವಿದ್ಯಾರ್ಥಿನಿಯರಿಗೆ ಬೆಳಗಾವಿಯ ಸಮಾಜ ಕಾರ್ಯಕರ್ತ, ಪರಿಸರ ತಜ್ಞ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಶಿವಾಜಿ ಕಾಗಣಿಕರ್ ಅವರು ಜಾಗೃತಿ ಮೂಡಿಸಿದರು.
ಬೆಳಗಾವಿಯ ಕೆಎಲ್‌ಇ ವೇಣುಧ್ವನಿ 90.4 ಎಫ್. ಎಮ್. ಸಮುದಾಯ ಬಾನುಲಿ ಕೇಂದ್ರ ಮತ್ತು ಅಪರೇಶನ್ ಮದತ್ ಸಹಯೋಗದಲ್ಲಿ ವಿಶ್ವ ರೇಡಿಯೋ ದಿನ ಆಚರಣೆ ಅಂಗವಾಗಿ ಶುಕ್ರವಾರ ದಿ. 14ರಂದು ಬೆಳಗಾವಿಯ ಬಾಲಿಕಾ ಆದರ್ಶ ವಿಧ್ಯಾಲಯದ ವಿದ್ಯಾರ್ಥಿನಿಯರಿಗೆ ವೇಣುಧ್ವನಿ ನಿಲಯ ನಿರ್ದೇಶಕ ಡಾ. ಸುನಿಲ್ ಜಲಾಲಪೂರೆ ಅವರ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿದ್ದ ಹವಾಮಾನ ಬದಲಾವಣೆ ಕುರಿತ ರಸಪ್ರಶ್ನೆ ಕಾರ್ಯಕ್ರಮ ಮತ್ತು ಸ್ವಚ್ಛ ಪರಿಸರ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಅಪರೇಶನ್ ಮದತ್ ಸದಸ್ಯ ರಾಹುಲ ಪಾಟೀಲ ಅವರು ವಿದ್ಯಾರ್ಥಿನಿಯರಿಗೆ ಪ್ಲಾಸ್ಟಿಕ್‌ನಿಂದಾಗುವ ದುಷ್ಪರಿಣಾಮಗಳ ಕುರಿತು ತಿಳಿಸಿದರು. ಹವಾಮಾನ ಬದಲಾವಣೆ ಕುರಿತ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ವೇಣುಧ್ವನಿ ಸಮುದಾಯ ಬಾನುಲಿ ಕೇಂದ್ರದಿಂದ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.
ಬಾಲಿಕಾ ಆದರ್ಶ ವಿಧ್ಯಾಲಯದ ಪ್ರಾಚಾರ್ಯ ಎನ್. ಒ. ದೊಂಕರಿ, ಶಿಕ್ಷಕಿ ಕೀರ್ತಿ ಚಿಂಚನಿಕರ್, ವೇಣುಧ್ವನಿ ಸಮುದಾಯ ಬಾನುಲಿ ಕೇಂದ್ರದ ಕಾರ್ಯಕ್ರಮ ಸಂಯೋಜಕ ಮಂಜುನಾಥ ಬಳ್ಳಾರಿ, ಕಾರ್ಯಕ್ರಮ ನಿರ್ವಾಹಕಿಯರಾದ ಮನಿಷಾ ಪಿ. ಎಸ್. ಮತ್ತು ನಿಷಾ ಟಕ್ಕರ್ ಹಾಗೂ ಶಾಲೆಯ ಸಿಬ್ಭಂದಿ ವರ್ಗದವರು ಉಪಸ್ಥಿತರಿದ್ದರು.