ಡಾ. ರಾಜ್ ಭಾರತೀಯ ಸಂಸ್ಕೃತಿಯ ರಾಯಭಾರಿ

ಲೋಕದರ್ಶನವರದಿ

ಶಿಗ್ಗಾವಿ 13:  ದಿ.ರಾಜ್ಕುಮಾರ್ ಭಾರತೀಯ ಸಂಸ್ಕೃತಿಯ ರಾಯಭಾರಿ. ಅವರ ಪ್ರತಿಯೊಂದು ಚಿತ್ರಗಳು ಸಮಾಜಕ್ಕೆ ಅನುಮಪ ಸಂದೇಶ ನೀಡಿವೆ ಎಂದು ಶಿಗ್ಗಾಂವ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಜಿ.ಹೆಳವರ ಹೇಳಿದರು.

     ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್ನ ರಾಜ್ಕುಮಾರ್ ಸರ್ಕಲ್ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕನ್ನಡ ಚಿತ್ರರಂಗದ ಮೆರು ನಟನ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಅವರ ಶಿಲ್ಪಕ್ಕೆ ಹೂವಿನ ಹಾರ ಹಾಕಿ ಮಾತನಾಡಿದರು.

    ಕನ್ನಡ ಚಿತ್ರರಂಗಕ್ಕೊಬ್ಬನೇ ರಾಜ್ಕುಮಾರ್. ಅವರ ಸ್ಥಾನ ತುಂಬಲು ಅವರೇ ಮತ್ತೆ ಹುಟ್ಟಿಬರಬೇಕೇ ಹೊರತು ಬೇರಾವ ನಟನಿಂದ ಆ ಸ್ಥಾನ ತುಂಬಲು ಸಾಧ್ಯವಿಲ್ಲ ಎಂದು ನುಡಿದರು.

ಆಡು ಮುಟ್ಟದ ಸೊಪ್ಪಿಲ್ಲ.

  ರಾಜ್ಕುಮಾರ್ ಅಭಿನಯಿಸದ ಪಾತ್ರಗಳಿಲ್ಲ ಎಂದ ಶಿವಾನಂದ ಹೆಳವರ, ನಮ್ಮ ಸಂಸಾರ, ಸಿಪಾಯಿ ರಾಮು, ಶಂಕರ ಗುರು, ಸನಾದಿ ಅಪ್ಪಣ, ಕವಿರತ್ನ ಕಾಳಿದಾಸ, ಎರಡು ಕನಸು, ಆಪರೇಷನ್ ಡೈಮಂಡ್ ರಾಕೆಟ್ ಇತ್ಯಾದಿ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯವನ್ನು ಪ್ರೇಕ್ಷಕರು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

     ರಾಜ್ ನಮ್ಮನ್ನಗಲಿ 13 ವರ್ಷಗಳಾಗಿವೆ ಎಂಬುದು ಎಷ್ಟು ಸತ್ಯವೋ, ಅವರು ನಮ್ಮೊಂದಿಗೆಯೇ ಇದ್ದಾರೆ ಎಂಬುದಕ್ಕೆ ಕಿರು ತೆರೆಯಲ್ಲಿ ಆಗಾಗ್ಗೆ ಪ್ರಸಾರಗೊಳ್ಳುವ ಅವರ ಚಲನಚಿತ್ರಗಳು, ನಾಡಿಗೆ ಅವರು ನೀಡಿದ ಕೊಡುಗೆಗಳು ಸಾಕ್ಷಿ ಎಂದು ಹೇಳಿದರು. ಅಶ್ವಿನಿ ಪಟ್ಟಣಶೆಟ್ಟಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಅಲ್ತಾಫ ಯತ್ನಳ್ಳಿ ವಂದಿಸಿದರು.