ಮಕ್ಕಳಿಗೆ ಉಚಿತ ಬ್ಯಾಗಗಳ ವಿತರಣೆ

 ಲೋಕದರ್ಶನ ವರದಿ

ಬ್ಯಾಡಗಿ25: ಇಲ್ಲಿನ ಶಿಕ್ಷಕ ದಂಪತಿಗಳಾದ ಶ್ರೀದೇವಿ ಹಾಗೂ ಚಂದ್ರು ಅವರ ಮಗಳು 'ಸಂಸ್ಕೃತಿ' ಇವಳ ಜನ್ಮದಿನದ ಅಂಗವಾಗಿ ಪಟ್ಟಣದ ಸ್ನೇಹ ಸದನದಲ್ಲಿರುವ ನಿರ್ಗತಿಕ ಮಕ್ಕಳಿಗೆ ಸ್ಕೂಲ್ ಬ್ಯಾಗಗಳನ್ನು ಉಚಿತವಾಗಿ ವಿತರಿಸುವ ಮೂಲಕ ಆಚರಿಸಿಕೊಂಡರು.

  ಇದೇ ಸಂದರ್ಭದಲ್ಲಿ ಮಾತನಾಡಿದ ಸಿಸ್ಟರ್ ಗ್ಲೋರಿಯಾ, ರಾಜ್ಯದಲ್ಲಿ ವಿದ್ಯಾದಾನ ಮಾಡುತ್ತಿರುವ ಬಹುತೇಕ ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕರು ಉಚಿತವಾಗಿ ಹಾಗೂ ಮುಕ್ತವಾಗಿ ನೀಡಿದಂತಹ ಕೊಡುಗೆಗಳಾಗಿವೆ, ಇದರಲ್ಲಿ ಕ್ರೈಸ್ತ ಮಿಶಿನರಿಗಳ ಸೇರಿದಂತೆ ಶರಣರು, ದಾರ್ಶನಿಕರ ಸ್ವಾಮೀಜಿಗಳ ಕೊಡುಗೆ ಅಪಾರ, ಪ್ರಮುಖವಾಗಿ ತುಮಕೂರಿನ ಸಿದ್ಧಗಂಗಾ, ಬೆಳಗಾವಿಯ ಕೆಎಲ್ಈ, ಚಿತ್ರದುರ್ಗದ ಎಸ್ಜೆಎಂ, ಸಿರಿಗೆರೆಯ ತರಳಬಾಳು, ಮೈಸೂರಿನ ಸುತ್ತೂರಮಠ, ಇತ್ತೀಚೆಗೆ ಕಾಗಿನೆಲೆಯ ಕನಕಗುರುಪೀಠ ಸೇರಿದಂತೆ ಹತ್ತು ಹಲವು ಸ್ವಾಮೀಜಿಗಳು ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ ನಿಸ್ವಾರ್ಥವಾಗಿ ಮಕ್ಕಳಿಗೆ ವಿದ್ಯಾದಾನ ಮಾಡುತ್ತಿದ್ದಾರೆ ಎಂದರು.

  ಸಿಸ್ಟರ್ ಸಿಲ್ವಿಯಾ ಮಾತನಾಡಿ, ಶೈಕ್ಷಣಿಕ ಅಭಿವೃದ್ಧಿಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಇಂದಿನ ದಿನಗಳಲ್ಲಿ ಬಹಳ ಪ್ರಮುಖವಾಗಿದೆ, ಇದರಿಂದ ಶಿಕ್ಷಣ ಇಲಾಖೆಯ ಮೆಲಿದ್ದ ಒಂದು ಜವಾಬ್ದಾರಿಯನ್ನು ಜನರೇ ನಿಭಾಯಿಸಿದಂತಾಗಲಿದ್ದು ಅದರಲ್ಲೂ ನಿರ್ಗತಿಕ ಮಕ್ಕಳಿಗೆ ಮಾಡಿದಂತಹ ಸಹಾಯ ಸಹಕಾರವನ್ನು ಸ್ನೇಹ ಸದನ ಸಂಸ್ಥೆ ಎಂದಿಗೂ ಮರೆಯುವುದಿಲ್ಲ ಎಂದರು.

     ವಿನ್ಸೆಂಟ್ ಫರೇರಾ ಮಾತನಾಡಿ, ಬಹುತೇಕ ದಂಪತಿಗಳು ಲಕ್ಷಗಟ್ಟಲೇ ಹಣವ್ಯಯಿಸಿ ಪಂಚತಾರ ಹೋಟೆಲ್ಗಳಲ್ಲಿ ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಉದಾಹರಣೆಗಳಿವೆ, ಅದರೆ ಶ್ರೀದೇವಿ ಹಾಗೂ ಚಂದ್ರು ಶಿಕ್ಷಕ ದಂಪತಿಗಳು ಇಂದು ತಮ್ಮ ಮಗಳು 'ಸಂಸ್ಕತಿ' ಇವಳ ಜನ್ಮದಿನವನ್ನು ನಿರ್ಗತಿಕ ಮಕ್ಕಳಿರುವ ಸ್ನೇಹ ಸದನದಲ್ಲಿ ಆಚರಿಸಿಕೊಂಡಿದ್ದಲ್ಲದೇ, ಇಲ್ಲಿನ ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗಗಳನ್ನು ವಿತರಿಸಿದ್ದು ಅತ್ಯಂತ ಶ್ಲಾಘನೀಯ ಹಾಗೂ ಸ್ವಾಗತಾರ್ಹ ಕ್ರಮವಾಗಿದೆ ಎಂದರು. ಈ ಸಂದರ್ಭದಲ್ಲಿ ಸಿಸ್ಟರ್ ಸಹನಾ, ಈರಣ್ಣ ಬಣಕಾರ, ಶ್ರೀಕಾಂತ ಬಗಾಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.