ಬೆಂಗಳೂರು,ಜು 26 ಪಕ್ಷದಿಂದ ರಾಜೀನಾಮೆ ನೀಡಿದ ಶಾಸಕರನ್ನು ಮನವೊಲಿಸುವ ಕೆಲಸ ಮಾಡುತ್ತಿಲ್ಲ.ವಿಧಾನಸಭೆಯಲ್ಲಿ ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೆ ರಾಜೀನಾಮೆ ನೀಡಿದ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದಿದ್ದಾರೆ ಹೀಗಾಗಿ ಅದು ಹೆಚ್ಚುಕಡಿಮೆ ಮುಗಿದು ಹೋದ ಅಧ್ಯಾಯ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ
ದೇವನಹಳ್ಳಿಯ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಾಸಕರನ್ನು ಮತ್ತೊಮ್ಮೆ ಮನವೊಲಿಸುವುದಿಲ್ಲ.ಅದು ಮುಗಿದು ಹೋದ ಅಧ್ಯಾಯವಾಗಿದೆ.ಉಪ ಚುನಾವಣೆ ಘೋಷಣೆಯಾದರೆ ಆ ಕ್ಷೇತ್ರಗಳಿಗೆ ಹೊಸಬರನ್ನು ಹುಡುಕಬೇಕಿದೆ ಎಂದು ಅವರು ತಿಳಿಸಿದರು.
ಮುಂಬೈನಲ್ಲಿ ಕುಳಿತ ರಾಜೀನಾಮೆ ನೀಡಿದ ಶಾಸಕರು ಸಿದ್ದರಾಮಯ್ಯ ನಮ್ಮ ನಾಯಕ ಅಂದರೆ ಹೇಗೆ, ಸಮಸ್ಯೆಗಳಿದ್ದರೆ ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಬಂದು ಬೇಟಿ ಮಾಡಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದುತ್ತು.ಅದನ್ನು ಬಿಟ್ಟು ಅಲ್ಲೆಲ್ಲೋ ಕುಳಿತು ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವುದು ಅವರಿಗೆ ಶೋಭಿಸುವುದಿಲ್ಲ ಎಂದು ಅವರು ಕಿಡಿಕಾರಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲು ಸಮಸ್ಯೆಯಿದೆ.ಅವರ ಪಕ್ಷಕ್ಕೆ ಬಹುಮತವಿದ್ದರೆ ತೊಂದರೆಯಿಲ್ಲ.ಬೇರೆ ಪಕ್ಷದವರನ್ನು ಕರೆತಂದು ನೂತನ ಸರ್ಕಾರ ರಚನೆ ಮಾಡುವುದು ಕಷ್ಟ, ಈಗ ಮೈತ್ರಿ ಸರ್ಕಾರ ಪತನವಾದ ರೀತಿಯಲ್ಲಿಯೇ ಬಿಜೆಪಿಯಲ್ಲೂ ಅಸಮಾಧಾನ ಸ್ಪೋಟಗೊಂಡು ಸರ್ಕಾರ ಉಳಿಸಿಕೊಳ್ಳುವುದು ಕಷ್ಟವಾಗಬಹುದು ಎಂದು ಭವಿಷ್ಯ ನುಡಿದರು.
ಮುಂಬರುವ ಉಪ ಚುನಾವಣೆಯಲ್ಲಿ ಅತೃಪ್ತ ಶಾಸಕರ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮೂಲಕ ಸ್ಪರ್ಧಿಸಬೇಕ ಅಥವಾ ಪ್ರತ್ಯೇಕವಾಗಿ ಸ್ಪರ್ಧಿಸಬೇಕ ಎಂಬುದನ್ನು ಎರಡೂ ಪಕ್ಷದ ಪ್ರಮುಖ ನಾಯಕರು ಕುಳಿತು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಮತ್ತೊಂದೆಡೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಅವರು ಪುಣೆಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತ ಶಾಸಕರನ್ನು ಭೇಟಿ ಮಾಡುವ ಬಗ್ಗೆ ಯಾವುದೇ ಸುಳಿವನ್ನು ನೀಡದ ಈಶ್ವರ್ ಖಂಡ್ರೆ , ರಾಜ್ಯದಲ್ಲಿ ರಾಜಕೀಯ ಪರಿಸ್ಥಿತಿಗೆ ಬಿಜೆಪಿಯೇ ಕಾರಣ.ಮುಂದಿನ ದಿನಗಳಲ್ಲಿ ಬಿಜೆಪಿಯೂ ಇದೇ ಪರಿಸ್ಥಿತಿ ಒದಗಿ ಬರಲಿದೆ.ಅವರು ಸಹ ಸುಭದ್ರವಾಗಿ ಸರ್ಕಾರ ನಡೆಸುವುದು ಅಸಾಧ್ಯ ಎಂದು ತಿಳಿಸಿದರು.
ಮತ್ತೊಂದು ಬೆಳವಣಿಗೆಯಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ,ಕೋರ್ಟ್ ಪ್ರಕರಣ ಒಂದರ ಸಂಬಂಧ ದೆಹಲಿಗೆ ತೆರಳುತ್ತಿದ್ದಾರೆ. ಈ ವೇಳೆ ಪಕ್ಷದ ಯಾವುದೇ ವರಿಷ್ಠರ ಭೇಟಿ ಮಾಡುವುದಿಲ್ಲ, ಸದ್ಯ ನನಗೆ ಪಕ್ಷದ ಯಾವುದೇ ಕೆಲಸ ಕಾರ್ಯಗಳಿಲ್ಲ ಎಂದರು. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಸರ್ಕಾರ ರಚನೆ ಮಾಡುವುದು ಬಿಡುವುದು ಯಡಿಯೂರಪ್ಪ ಅವರಿಗೆ ಬಿಟ್ಟ ವಿಚಾರ. ಅತೃಪ್ತ ಶಾಸಕರ ಪ್ರಶ್ನೆಗೆ ಉತ್ತರಿಸಿದ ಅವರು ರಾಜೀನಾಮೆ ನೀಡಿದ ಯಾವುದೇ ಶಾಸಕರು ಅತೃಪ್ತರಲ್ಲ ತೃಪ್ತರೇ ಎಂದು ಅವರು ತಿಳಿಸಿದರು.