ನೂತನ ಅಧ್ಯಕ್ಷರನ್ನು ಪದಚ್ಯುತಗೊಳಿಸಿ: ಸಂತೋಷ ಕಕಮರಿ
ಅಥಣಿ 23: ಅಥಣಿ ಗ್ರಾಮೀಣ ಗ್ರಾಮ ಪಂಚಾಯತನ ನೂತನ ಅಧ್ಯಕ್ಷರ ಆಯ್ಕೆಯಾದ ಬೆನ್ನಲ್ಲೆ ಮಾಜಿ ಅಧ್ಯಕ್ಷರು ಆರೋಪಗಳ ಸುರಿಮಳೆ ಹರಿಸಿದರು. ನೂತನ ಅಧ್ಯಕ್ಷ ಶಂಕರ ರಾಮು ಗಡದೆ ಭರಮಖೋಡಿಯ ವಿವಿಧೋದ್ದೇಶಗಳ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿಯಾಗಿ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಒಬ್ಬನೇ ವ್ಯಕ್ತಿ ಎರಡು ಲಾಭದಾಯಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುವುದು ಸಂವಿಧಾನ ಬಾಹೀರವಾಗಿದ್ದು, ನೂತನ ಅಧ್ಯಕ್ಷರನ್ನು ಪದಚ್ಯುತಗೊಳಿಸಬೇಕು ಎಂದು ಮಾಜಿ ಅಧ್ಯಕ್ಷ ಸಂತೋಷ ಕಕಮರಿ ಚುನಾವಣಾಧಿಕಾರಿಯನ್ನು ಆಗ್ರಹಿಸಿದರು.
ಸಹಕಾರಿ ಸಂಘದಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಕೂಡ ಗ್ರಾಮ ಪಂಚಾಯತ ಸದಸ್ಯರಾಗಿ ಜೊತೆಗೆ ಇಂದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಸಂವಿಧಾನ ಬಾಹೀರವಾಗಿದೆ ಎಂದು ಆರೋಪಿಸಿದ ಅವರು ಶಂಕರ ಗಡದೆ ಅಧ್ಯಕ್ಷರಾಗಿ ಆಯ್ಕೆಯಾಗಲು ಅವಕಾಶ ಕಲ್ಪಿಸಬಾರದು ಎಂದು ಅಗತ್ಯ ದಾಖಲೆಗಳನ್ನು ಕೊಟ್ಟು ಚುನಾವಣಾಧಿಕಾರಿಯನ್ನು ಆಗ್ರಹಿಸಿದರೂ ಕೂಡ ಚುನಾವಣಾಧಿಕಾರಿಗಳು ಕಿವಿಗೊಡಲಿಲ್ಲ. ಅವರ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ನೀಡುತ್ತೇನೆ ಮತ್ತು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ ಎಂದರು.
ಚುನಾವಣಾಧಿಕಾರಿಯ ಮೇಲೆ ಸ್ಥಳೀಯ ಶಾಸಕರು ಮತ್ತು ಕೆಲ ಮುಖಂಡರು ಒತ್ತಡ ತಂದಿದ್ದರಿಂದ ಅಧಿಕಾರಿಗಳು ಕಾನೂನಿಗೆ ವಿರುದ್ಧವಾಗಿ ವರ್ತಿಸಿದ್ದಾರೆ ಎಂದು ಸಂತೋಷ ಕಕಮರಿ ತನ್ನ ಬಳಿ ಇದ್ದ ದಾಖಲೆಗಳನ್ನು ತೋರಿಸಿ ಹೇಳಿದರು.