ಲೋಕದರ್ಶನ ವರದಿ
ಕಂಪ್ಲಿ06: ತಾಲೂಕಿನ ಪೊಲೀಸ್ ಠಾಣಾ ಆವರಣದಲ್ಲಿ, ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ನಿನ್ನೆ ಸಂಜೆ ನಡೆಯಿತು.
ಸಿಪಿಐ ಡಿ.ಹುಲುಗಪ್ಪ ಅಧ್ಯಕ್ಷತೆವಹಿಸಿ ಮಾತನಾಡಿ, ಅಪರಾಧಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಕಡಿವಾಣ ಹಾಕಲು ಪ್ರತಿಯೊಬ್ಬ ನಾಗರೀಕರು ಕೂಡ ಜಾಗೃತಿವಹಿಸಬೇಕಾಗಿದೆ. ಸಾರ್ವಜನಿಕರನ್ನು ರಕ್ಷಿಸುವ ಜೊತೆಗೆ ಭದ್ರತೆ ಒದಗಿಸುವುದು ಮುಖ್ಯ ಕರ್ತವ್ಯವಾಗಿದೆ. ಭತ್ತದ ಖರೀದಿ ಮಾಡುವ ಕೆಲ ದಂಧೆಕೋರರು ರೈತರಿಂದ ಭತ್ತ ತೆಗೆದುಕೊಂಡು ಪರಾರಿ ಆಗುವುದು ಸಾಮಾನ್ಯವಾಗಿದೆ. ಇದರಿಂದ ರೈತರು ಕೈಸುಟ್ಟುಕೊಳ್ಳುತ್ತಿದ್ದಾರೆ. ಭತ್ತ ಮಾರಾಟ ಸಂದರ್ಭದಲ್ಲಿ ರೈತರು ಒಳ್ಳೆಯ ವ್ಯಕ್ತಿಗಳಿಗೆ ಕೊಡಲು ಜಾಗೃತಿವಹಿಸಬೇಕು. ಅಪರಾಧ ತಡೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು.
ನಂತರ ಪಿಎಸ್ಐ ಕೆ.ಬಿ.ವಾಸುಕುಮಾರ್ ಮಾತನಾಡಿ, ಸಮಾಜದ ಶ್ವಾಸ್ತ್ಯವನ್ನು ಕಾಪಾಡಲು ಅಪರಾಧಗಳನ್ನು ಕಡಿಗೊಳಿಸಬೇಕಾಗಿದೆ. ಸಾರ್ವಜನಿಕರು ಅಪರಾಧದ ಸಮಸ್ಯೆಗಳನ್ನು ಹಂಚಿಕೊಂಡರೆ, ಪತ್ತೆ ಹಚ್ಚಲು ಸಹಕಾರಿಯಾಗುತ್ತದೆ. ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶಯಿಲ್ಲ. ಅಪರಾಧ ತಡೆಯುವ ಜೊತೆಗೆ ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಪುರಸಭೆ ಅಧ್ಯಕ್ಷ ಎಂ.ಸುಧೀರ್ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಎಂ.ಮರೆಣ್ಣ, ಮುಖಂಡರಾದ ವೆಂಕೋಬಣ್ಣ, ಕಂಬತ್ ಕೃಷ್ಣ, ಕುರಿ ಹುಸೇನಪ್ಪ, ಜಾಫರ್, ಆನಂದ ಅಂಗಡಿ, ಹನುಮೇಶ್, ಕೈಲಾಸಪತಿ, ಡಿ.ಇಸ್ಮಾಯಿಲ್ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.
ಕಂಪ್ಲಿ ಪೊಲೀಸ್ ಠಾಣೆಯಲ್ಲಿ ನಡೆದ ಅಪರಾಧ ತಡೆ ಮಾಸಾಚರಣೆಯಲ್ಲಿ ಸಿಪಿಐ ಡಿ.ಹುಲುಗಪ್ಪ ಮಾತನಾಡಿದರು.