ಕಾನ್ಸ್ಟೆಬಲ್ ನೀಡಿದ ಕಿರುಕುಳವೇ ನನ್ನ ಮಗ ವಾಜಿದ್ ಸಾವಿಗೆ ಕಾರಣ: ಅಸ್ಲಾಂ ಶೇಖ್

ಯಲ್ಲಾಪುರ:     ತನಿಖೆಯ ಹೆಸರಿನಲ್ಲಿ ಕಾನ್ಸ್ಟೆಬಲ್ನೊಬ್ಬ  ನೀಡಿದ  ಕಿರುಕುಳವೇ ನನ್ನ ಮಗ ವಾಜಿದ್ ಅಲಿ ಶೇಖ್ ಸಾವಿಗೆ ಕಾರಣ ಎಂದು ಮೃತಪಟ್ಟ  ಯುವಕನ ತಂದೆ ಅಸ್ಲಾಂ ಶೇಖ್ ಆರೋಪಿಸಿದರು.

   ಅವರು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಮೂರು ತಿಂಗಳಿನಿಂದ ಇಸ್ಲಾಂ ಗಲ್ಲಿಯಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆದಾಗಲೆಲ್ಲ ನನ್ನ ಮಗನನ್ನು ವಿನಾಕಾರಣವಾಗಿ ಠಾಣೆಗೆ ಒಯ್ದು ದಿನವಿಡೀ ಕುಳ್ಳಿರಿಸಿ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು. ಇದರಿಂದ ಆತ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಆತನಿಗೆ ಕಾಯಿಲೆಯೂ  ಇತ್ತು.ಆತನನ್ನು ಶಿರಸಿ ಮಾರಿಕಾಂಬಾ ಆಸ್ಪತ್ರೆಯಿಂದ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆತ ಮೃತಪಟ್ಟಿದ್ದು, ಸಾಯುವ ಮುನ್ನ ಸಹ ಕಾನ್ಸ್ಟೇಬಲ್ ಕಿರುಕುಳ ನೀಡಿರುವ ಕುರಿತು ತನ್ನ ಬಳಿ ಹೆಳಿರುವಾದಿ ತಿಳಿಸಿದ್ದಾರೆ.

    ಪ.ಪಂ ಸದಸ್ಯ ಕೈಸರ್ ಸೈಯ್ಯದ್ ಮಾತನಾಡಿ, ಕಿರುಕುಳದ ಕುರಿತು ವಾಜಿದ್ ಈ ಹಿಂದೆ ನನ್ನ ಬಳಿಯೂ ದೂರಿದ್ದ. ಅದನ್ನು ಕಾನ್ಸ್ಟೇಬಲ್ ಹಾಗೂ ಮೇಲಾಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದ್ದೆ. ಆದರೂ ಕಿರುಕುಳ ಮುಂದುವರಿದಿರುವುದು ಈ ಅನಾಹುತಕ್ಕೆ ಕಾರಣವಾಗಿದೆ.  ಘಟನೆಗೆ ಕಾರಣರಾದ ಕಾನ್ಸ್ಟೇಬಲ್  ನಾಗಪ್ಪ ಅವರು ಇಲ್ಲಿಂದ ವಗರ್ಾವಣೆಯಾಗಬೇಕು. ಅವರ ವಿರುದ್ಧ ಕಾನೂನು ಕ್ರಮ ಆಗಬೇಕು ಎಂದರು.

    ಸಮಾಜದ ಮುಖಂಡ ಅಸದ್ ಖಾನ್ ಮಾತನಾಡಿ, ಕಾನ್ಸ್ಟೇಬಲ್ ಹಿಂದಿನಿಂದಲೂ ಮುಸ್ಲಿಂ ಸಮಾಜದ ಯುವಕರ ಮೇಲೆ ಅನಗತ್ಯವಾಗಿ ಆರೋಪ ಹೊರಿಸಿ ಕಿರುಕುಳ ನೀಡುತ್ತಿದ್ದಾರೆ. ಸಿಗರೇಟ್ ಸೇದುವ ಕಾರಣಕ್ಕಾಗಿ 6 ಜನ ಯುವಕರ ವಿರುದ್ಧ ಗಾಂಜಾ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಕಳೆದ ಮೂರೂವರೆ ತಿಂಗಳಿನಿಂದ ಅವರು ಬಂಧನದಲ್ಲಿದ್ದಾರೆ. ನಮ್ಮ ಹೋರಾಟ ಇಲಾಖೆಯ ಬೇರೆ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧವಲ್ಲ, ಕಿರುಕುಳ ನೀಡಿದ ಈ ಒಬ್ಬ ಕಾನ್ಸ್ಟೇಬಲ್ ವಿರುದ್ಧ ಮಾತ್ರ ಎಂದರು.

   ಕ.ರ.ವೇ ಪ್ರಮುಖ ಶಂಶುದ್ದೀನ್ ಮಾರ್ಕರ್ ಮಾತನಾಡಿ, ಮೃತ ಯುವಕ ತಮ್ಮ ಸಂಘಟನೆಯ ಸದಸ್ಯನಾಗಿದ್ದು, ಅನ್ಯಾಯದ ವಿರುದ್ಧ ಸಂಘಟನೆಯ ವತಿಯಿಂದ ಅ.29 ರಂದು ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದೆಂದರು. ಈ ಸಂದರ್ಭದಲ್ಲಿ ಶಫಿ ಮಹಮ್ಮದ್ ಶೇಖ್, ಹಾರಿಫ್ ರಜಾಕ್, ಅಬ್ದುಲ್ ಅಲಿ,  ಬಶೀರ್ ಸೈಯ್ಯದ್,ಮುಂತಾದವರು ಉಪಸ್ಥಿತರಿದ್ದರು.