ಭಟ್ಕಳ 04: ಶಿಕ್ಷಣ ಕ್ಷೇತ್ರದ ಸುಧಾರಣೆಗೆ ದುಡಿಯುತ್ತಿರುವ ಬೆಂಗಳೂರಿನ ಬ್ರಿಕ್ವವರ್ಕ್ ಫೌಂಡೇಷನ್ ಭಟ್ಕಳ ತಾಲೂಕಿನ ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅವುಗಳ ಪರಿವರ್ತನೆಗೆ ಮುಂದಾಗಿದೆ.
ಪ್ರಸ್ತುತ ಬ್ರಿಕ್ವವರ್ಕ್ ಫೌಂಡೇಷನ್ ಶಿರಾಲಿಯಲ್ಲಿರುವ ಸಾಲೆಮನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಿದೆ. ಶಾಲೆಯ ಮೂಲಸೌಕರ್ಯದಲ್ಲಿ ಆಮೂಲಾಗ್ರ ಬದಲಾವಣೆಯನ್ನು ತಂದಿರುವ ಸಂಸ್ಥೆ ಶಿಕ್ಷಣ ಗುಣಮಟ್ಟ ಸುಧಾರಣೆಗೂ ಮುಂದಾಗಿದೆ. ಮುಂದಿನ ಮೂರು ವರ್ಷಗಳವರೆಗೆ ಇಲ್ಲಿ ಅಭಿವೃದ್ಧಿ ಚಟುವಟಿಕೆಗಳು ನಡೆಯಲಿವೆ.
ಶಾಲೆಯಲ್ಲಿ ಆಧುನಿಕ ಕಂಪ್ಯೂಟರ್ ಪ್ರಯೋಗಾಲಯವನ್ನು ಇತ್ತೀಚೆಗೆ ಉದ್ಘಾಟಿಸಲಾಗಿದೆ. ಶಿರಾಲಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟೇಶ್ಎನ್. ನಾಯಕ್ ಅವರು ಕಂಪ್ಯೂಟರ್ ಪ್ರಯೋಗಾಲಯವನ್ನು ಉದ್ಘಾಟಿಸಿದರು. ತಾಲೂಕು ಪಂಚಾಯತ್ ಸದಸ್ಯರಾದ ಮಾಲತಿ ದೇವಾಡಿಗ, ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಮುಂಜಿ, ಬ್ರಿಕ್ವವರ್ಕ್ ಫೌಂಡೇಷನ್ನ ಅಧ್ಯಕ್ಷ ಸಂಗೀತ ಕುಲಕರ್ಣಿ ಇನ್ನಿತರರು ಹಾಜರಿದ್ದರು.
ಸಂಗೀತ ಕುಲಕರ್ಣಿ ಅವರು ಮಾತನಾಡಿ ಸರಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಲು ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದ ಅಗತ್ಯವಿದೆ. ಖಾಸಗಿ ಶಾಲೆಗಳಲ್ಲಿ ಮಾತ್ರ ಉತ್ತಮ ಶಿಕ್ಷಣ ದೊರೆಯುತ್ತದೆ ಎಂಬ ಮನೋಭಾವ ಹೋಗಬೇಕು. ಇದರಿಂದ ಸರಕಾರಿ ಶಾಲೆಗಳು ಅಧಃಪತನದತ್ತ ಸಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಬ್ರಿಕ್ವವರ್ಕ್ ಫೌಂಡೇಷನ್ ''ಸ್ವಚ್ಛ ಶಾಲೆ" ಅಭಿಯಾನವನ್ನೂ ಆರಂಭಿಸಿದ್ದು ಇದರ ಮೂಲಕ ಹಳೆಯ ಮತ್ತು ಮುರಿದ ಪೀಠೋಪಕರಣ, ಅನಗತ್ಯ ದಸ್ತಾವೇಜುಗಳನ್ನು ತೆಗೆದುಹಾಕಿ ಸ್ವಚ್ಛಗೊಳಿಸಲಾಗುತ್ತಿದೆ. ಶೌಚಾಲಯಗಳನ್ನು ನವೀಕರಿಸಿ, ಹೊಸ ಪೇಂಟ್ ಮಾಡುವುದಲ್ಲದೇ ಹೊಸ ಪೀಠೋಪಕರಣಗಳನ್ನೂ ಶಾಲೆಗೆ ಒದಗಿಸಲಾಗುತ್ತಿದೆ. ಕಂಪೌಂಡ್ನಿಂದ ಹಿಡಿದು ಸಂಪೂರ್ಣ ಶಾಲೆಯನ್ನು ನವೀಕರಿಸಲಾಗುತ್ತಿದೆ.
ಶಿಕ್ಷಣ ಸುಧಾರಣೆಗೆ ಗಮನ ಕೊಟ್ಟಿರುವ ಬ್ರಿಕ್ವಕರ್್ ಫೌಂಡೇಷನ್ ಈ ಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ಲ್ಯಾಬ್ ಶಾಲೆಯಲ್ಲಿ ಈಗಾಗಲೇ ನಡೆಸುತ್ತಿದೆ. ಕನ್ನಡ ಮತ್ತು ಇಂಗ್ಲೀಷ್ ಸಾಹಿತ್ಯವಿರುವ ಸುಸಜ್ಜಿತ ಗ್ರಂಥಾಲಯವಿದೆ. ಯೋಗ, ವ್ಯಕ್ತಿತ್ವ ಅಭಿವೃದ್ಧಿ, ಆಟೋಟಗಳಿಗೂ ಒತ್ತು ನೀಡುತ್ತಿರುವುದರಿಂದ ಶಾಲೆಗೆ ಬೇಡಿಕೆ ಹೆಚ್ಚಾಗಿದೆ ಎಂದು ಬ್ರಿಕ್ವವರ್ಕ್ ಫೌಂಡೇಷನ್ನ ಪ್ರೋಗ್ರಾಮ್ ಮ್ಯಾನೇಜರ್ ಅಜಯನ್ ಅಭಿಪ್ರಾಯಪಟ್ಟರು.
ತಾಲೂಕಿನಲ್ಲಿರುವ ಸರಕಾರಿ ಅನುದಾನದ ಜನತಾ ವಿದ್ಯಾಲಯ ಸಂಸ್ಥೆಯ ಹೈಸ್ಕೂಲಿನಲ್ಲಿಯೂ ಬ್ರಿಕ್ವವರ್ಕ್ ಫೌಂಡೇಷನ್ ಈ ಅಭಿವೃದ್ಧಿ ಚಟುವಟಿಕೆಗಳನ್ನು ಆರಂಭಿಸಿದೆ. ಹಂತಹಂತವಾಗಿ ಇನ್ನಷ್ಟು ಶಾಲೆಗಳನ್ನು ದತ್ತು ತೆಗೆದುಕೊಳ್ಳಲು ಸಂಸ್ಥೆ ನಿರ್ಧರಿಸಿದೆ.