ಗುಡ್ಡದ ರೇವಣಸಿದ್ಧೇಶ್ವರ ವಿರಕ್ತಮಠದ ಜಾತ್ರಾ: ಆತ್ಮ ಪರಮಾತ್ಮ ಬೇರೆ ಬೇರೆ ಅಲ್ಲ: ಪ್ರಭು ಮಹಾರಾಜರು

ರಾಯಬಾಗ 20: ಆತ್ಮ ಪರಮಾತ್ಮ ಬೇರೆ ಬೇರೆ ಅಲ್ಲ. ಮನುಷ್ಯ ತನ್ನ ಅಂತರಂಗವನ್ನು ಅರಿತರೆ ಮಾತ್ರ ಜೀವನದಲ್ಲಿ ಮುಕ್ತಿ ಪಡೆಯಲು ಸಾಧ್ಯವೆಂದು ಹಿಪ್ಪರಗಿ ಸಂಗಮೇಶ್ವರ ಮಠದ ಪ್ರಭು ಮಹಾರಾಜರು ನುಡಿದರು.

ಶುಕ್ರವಾರ ರಾತ್ರಿ ತಾಲೂಕಿನ ಭೆಂಡವಾಡ ಗ್ರಾಮದಲ್ಲಿ ಗುಡ್ಡದ ರೇವಣಸಿದ್ಧೇಶ್ವರ ವಿರಕ್ತಮಠದ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಧಾಮರ್ಿಕ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಆತ್ಮ ವಿಕಾರವಾದರೆ ಪರಮಾತ್ಮನನ್ನು ಕಾಣಲು ಸಾಧ್ಯವಿಲ್ಲ. ಮನಸ್ಸನ್ನು ಏಕಾಗ್ರತೆಯಿಂದ ಹಿಡಿದಿಟ್ಟು, ಅಂತರಮುಖಿಯಾಗಿ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲು ಗುರುವಿನ ಮಾರ್ಗದರ್ಶನಬೇಕೆಂದರು. 

ಅಧ್ಯಕ್ಷತೆಯನ್ನು ವಹಿಸಿದ್ದ ಭೆಂಡವಾಡ ವಿಕ್ತಮಠದ ಗುರುಸಿದ್ಧ ಸ್ವಾಮಿಜಿಯವರು ಮಾತನಾಡಿ, ರೇವಣಸಿದ್ಧೇಶ್ವರ ವಿರಕ್ತಮಠ ಇಂದು ಈ ಎತ್ತರಕ್ಕೆ ಬೆಳೆದು, ಇಲ್ಲಿ ಬರುವ ಭಕ್ತಾಧಿಗಳಿಗೆ ಅನ್ನದಾಸೋಹ, ಆಶ್ರಯ ದೊರಕುತ್ತಿರುವುದು ಮಠದ ಸದ್ಭಕ್ತರಿಂದ ಮತ್ತು ರೇವಣಸಿದ್ಧೇಶ್ವರ ಕೃಪೆಯಿಂದ ಸಾಧ್ಯವಾಗಿದೆಯೆಂದರು.

ಘಟಪ್ರಭಾ ಹೊಸಮಠದ ವಿರುಪಾಕ್ಷದೇವರು ಆಶೀರ್ವಚನ ನೀಡಿದರು. ಬೆಳವಿ ಸಿದ್ದಾರೂಢಮಠದ ಮೃತ್ಯುಂಜಯ ಸ್ವಾಮೀಜಿ, ಕಂಕಣವಾಡಿಯ ಮಾರುತಿ ಶರಣರು ಮತ್ತು ಹುಕ್ಕೇರಿಯ ವಿಠಲ ಮಹಾರಾಜರುಗುರುವಿನ ಮಹತ್ವದ ಕುರಿತು ಪ್ರವಚನ ನೀಡಿದರು.

ಅತಿಥಿಗಳಾಗಿ ವಸಂತರಾವ್ ಪಾಟೀಲ ಸಕ್ಕರೆ ಕಾರಖಾನೆ ಅಧ್ಯಕ್ಷ ಪ್ರತಾಪರಾವ್ ಪಾಟೀಲ, ಸಾಹಿತಿ ಎಸ್.ವಾಯ್. ಹಂಜಿ, ನಿವೃತ್ತ ಪ್ರಾಚಾರ್ಯ ಎಮ್.ಬಿ.ಕುದರಿ, ಮೂಡಲಗಿ ವಕೀಲರ ಸಂಘದ ಅಧ್ಯಕ್ಷ ಕೆ.ಪಿ.ಮಗದುಮ್ಮ, ಗೋಪಾಲ ಬಿದರಿ, ಅಪ್ಪಶಿ ಪಕಾಂಡಿ ಆಗಮಿಸಿದ್ದರು. 

ಭೆಂಡವಾಡ, ಮಂಟೂರ, ಕಟಕಭಾಂವಿ, ಮಾವಿನಹೊಂಡ, ಜೋಡಟ್ಟಿ ಗ್ರಾಮಗಳ ಭಕ್ತಾದಿಗಳು ಪಾಲ್ಗೊಂಡಿದ್ದರು.

ರಾತ್ರಿ ಘಟಪ್ರಭಾದ ಶಿವಪಾರ್ವತಿ ಭಜನಾ ಮಂಡಳದಿಂದ ಭಜನೆ ಹಾಗೂ ಕರಡಿ ಮಜಲು ಖಣಿವಾದನ ಕಾರ್ಯಕ್ರಮಗಳು ಜರುಗಿದವು.