ಶೈಕ್ಷಣಿಕ ಸಾಧನೆ ಒಂದು ತಪಸ್ಸು: ಕುಂಬಾರ್
ಬೀಳಗಿ 16: ಸ್ಪರ್ಧಾತ್ಮಕ ದಿನಮಾನಗಳಲ್ಲಿ ಸಾಂಪ್ರದಾಯಿಕ ಓದಿನೊಂದಿಗೆ ಸಂಶೋಧನಾತ್ಮಕ ಮನೋಭಾವ ಬೆಳೆಸಿಕೊಳ್ಳಿ, ಕೇವಲ 65 ದಿನಗಳಲ್ಲಿ ನಿಮ್ಮ ಬೋರ್ಡ್ ಪರೀಕ್ಷೆಗೆ ತಮ್ಮನ್ನು ಓದಿನಲ್ಲಿ ತೊಡಗಿಸಿಕೊಳ್ಳಿ ಎಂದು ಸಿದ್ಧನಾಥ ಸರಕಾರಿ ಪ್ರೌಢ ಶಾಲೆ ಶಿಕ್ಷಕ ಡಾ. ಶಶಿಧರ್ ಕುಂಬಾರ್ ಹೇಳಿದರು.
ಪಟ್ಟಣದ ಹೋಲಿಸೆಂಟ್ ವಿಜ್ಞಾಣ ಮಹಾವಿದ್ಯಾಲಯ ಮತ್ತು ಆಂಗ್ಲ ಮಾಧ್ಯಮ ಶಾಲೆ ಆಯೋಜಿಸಿದ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಎ.ಎಂ ಸೋಲಾಪುರ್ ಮಾತನಾಡಿ ಶಿಕ್ಷಣ ರಂಗದಲ್ಲಿ ಗ್ರಾಮೀಣ ಮಕ್ಕಳು ಪಟ್ಟಣದ ವಿದ್ಯಾರ್ಥಿಗಳಿಗಿಂತ ಯಾವುದಕ್ಕೂ ಕಡಿಮೆ ಇಲ್ಲ ಎನ್ನುವಂತೆ ಮನೋಭಾವ ಬೆಳೆಸಿಕೊಳ್ಳಬೇಕಾದರೆ ಹೆಚ್ಚು ಶ್ರಮವಹಿಸಿ ವಿದ್ಯಾರ್ಥಿಗಳು ಅಧ್ಯಯನದಲ್ಲಿ ತೊಡಗಬೇಕು ಹಾಗೂ,"ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಇಂದಲ್ಲ ನಾಳೆ ಫಲ ಕೊಟ್ಟೆ ಕೊಡುವುದು". ಎಂದರು.
ಆರ್ ಎಂ ಗುಬ್ಯಾಡ್ ಮಾತನಾಡಿ ತಂದೆಯಿಂದ ಹೆಸರು ತಾಯಿಂದ ಉಸಿರು ಬರುತ್ತೆ ಆದರೆ ಶಿಕ್ಷಣದಿಂದ ಉಸಿರು ಇರುವವರೆಗೂ ಹೆಸರು ಬರುತ್ತದೆ ಎಂದರು.
ಸರಸ್ವತಿ ಮದಗುಣಿಕಿ ಸ್ವಾಗತಿಸಿದರು. ವಾರ್ಷಿಕ ವರದಿಯ ವಾಚನವನ್ನು ಪಿ.ಪಿ.ಪವಾರ್ ನಡೆಸಿಕೊಟ್ಟರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪಾರಿತೋಷಕಗಳನ್ನು ಹಾಗೂ ನಗದು ಬಹುಮಾನವನ್ನು ಪಾಲಕ ಪ್ರತಿನಿಧಿಗಳಾದ ಅರ್ಜುನ್ ಲಗಳಿ, ಬಸವರಾಜ್ ಬಡಿಗೇರ್, ಶೋಭಾ ನಾಯಕ್, ಜಯಶ್ರೀ ತಳಕೇರಿ ನೆರವೇರಿಸಿದರು.
ಮೀನಾಕ್ಷಿ ಶಿರೋಲ್ ವಾರ್ಷಿಕ ಕ್ರೀಡಾ ಚಟುವಟಿಕೆಗಳ ಭಿತ್ತಿ ಚಿತ್ರಗಳನ್ನು ಕ್ಯಾಲೆಂಡರ್ ರೂಪದಲ್ಲಿ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿಕೊಟ್ಟರು.
ಸಂಸ್ಥೆಯ ಕಾರ್ಯದರ್ಶಿ ಎ ಎ ಸೋಲಾಪುರ್, ಅಬ್ದುಲ್ ಭಾಸಿದ್ ಸೋಲಾಪುರ್, ಡೈರೆಕ್ಟರ್ ನಹಿಮ್ ಕಲಬುರ್ಗಿ, ಆಡಳಿತ ಅಧಿಕಾರಿ ಎಸ್ ಎಂ ಲಮಾಣಿ, ಪಿಯು ವಿಭಾಗದ ಪ್ರಾಚಾರ್ಯ ಭಾರತಿ ಭಿಕ್ಷಾವತಿ ಮಠ ಉಪಸ್ಥಿತರಿದ್ದರು. ನಸರಿನ್ ಮುಲ್ಲಾ ನಿರೂಪಿಸಿ, ಮೆಹರ್ ಮುಲ್ಲಾ ವಂದಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.