ಸಂಧ್ಯಾ ಟೊಣಪಿ ಮತ್ತು ತೇಜಸ್ವಿನಿ ಕದಡಿ ರಚಿಸಿದ ಆಧ್ಯಾತ್ಮಿಕ ಜ್ಞಾನದ ಖಣಿ ಉಗಾಭೋಗಗಳು ಗ್ರಂಥ ಬಿಡುಗಡೆ

A mine of spiritual knowledge by Sandhya Tonapi and Tejaswini Kadadi released

ಸಂಧ್ಯಾ ಟೊಣಪಿ ಮತ್ತು ತೇಜಸ್ವಿನಿ ಕದಡಿ ರಚಿಸಿದ ಆಧ್ಯಾತ್ಮಿಕ ಜ್ಞಾನದ ಖಣಿ ಉಗಾಭೋಗಗಳು ಗ್ರಂಥ ಬಿಡುಗಡೆ

ಅಥಣಿ 28: ಅಡಿವೇಶಾಚಾರ್ಯ ಜೋಶಿಯವರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಅಥಣಿಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ  ಪಾಠ, ಪ್ರವಚನ, ನಿತ್ಯ ಪಾರಾಯಣ, ಅನ್ನ ದಾನದಂತಹ ವಿವಿಧ ಧಾರ್ಮಿಕ ಕಾರ್ಯಗಳ ಜೊತೆಗೆ ದೇವಸ್ಥಾನದ ಅಭಿವೃದ್ಧಿಗೆ  ಶ್ರಮಿಸಿದ್ದಾರೆ ಎಂದು  ಬೆಂಗಳೂರಿನ ವಿದ್ಯಾಧೀಶ ಸಂಸ್ಕೃತ ಶೋಧ ಕೇಂದ್ರದ ನಿರ್ದೇಶಕರಾದ ಡಾ.ಕೃಷ್ಣಾಚಾರ್ಯ ಉಪಾಧ್ಯಾಯ ಹೇಳಿದರು.           

ಅವರು ಅಡಿವೇಶಾಚಾರ್ಯ ಜೋಶಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ ನರಸಿಂಹ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಜ್ಞಾನ ಸತ್ರದ ಮಂಗಲೋತ್ಸವದಲ್ಲಿ  ಭಾಗವಹಿಸಿ ಮಾತನಾಡುತ್ತಿದ್ದರು. ಅಡಿವೇಶಾಚಾರ್ಯರು  ನಿವೃತ್ತಿಯ ನಂತರ ತಮ್ಮ ಸಂಪೂರ್ಣ ಸಮಯವನ್ನು ದೇವಸ್ಥಾನಕ್ಕಾಗಿ ಮತ್ತು ಬ್ರಾಹ್ಮಣ ಸಮಾಜದ ಅಭಿವೃದ್ಧಿಗೆ ಮೀಸಲಿಟ್ಟಿದ್ದರು ಅಷ್ಟೇ ಅಲ್ಲ ಬ್ರಾಹ್ಮಣ ಸಮಾಜದ ಜೊತೆಗೆ ಎಲ್ಲ ಸಮಾಜಗಳ ಜೊತೆಗೆ ಒಳ್ಳೆಯ ಸೌಹಾರ್ದ ಸಂಬಂಧ ಹೊಂದಿದ್ದರು ಎಂದ ಅವರು ದೇವಾಲಯದಲ್ಲಿ ನಿರಂತರವಾಗಿ ಜ್ಞಾನ ಸತ್ರ, ಜಪ-ತಪ ನಡೆಸಿಕೊಂಡು ಬಂದರು ಎಂದರು.        

ಜ್ಞಾನ ಸತ್ರ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಪಂ.ಬಿಂದುಮಾಧವಾಚಾರ್ಯ ಜೋಶಿ ಮಾತನಾಡಿ, ವೈಶಾಖ ಮಾಸದಲ್ಲಿ  ಏಳು ದಿನಗಳ ಕಾಲ  ನಡೆಯುವ ಲಕ್ಷ್ಮೀ ನರಸಿಂಹ ಜಯಂತಿ ಉತ್ಸವ, ರಥೋತ್ಸವವನ್ನು ಅದ್ದೂರಿಯಾಗಿ ಸತತ ನಡೆಸಿಕೊಂಡು ಬಂದ ಇವರು ದೇವಸ್ಥಾನದ ಅಭಿವೃದ್ಧಿಗೆ ಸರಕಾರದ ಅನುದಾನದ ಹಿಂದೆ ಬೀಳದೆ ತಮ್ಮ ಸ್ವಂತ ಆದಾಯ ಮತ್ತು ಭಕ್ತರಿಂದ ಬಂದ ಆದಾಯದಲ್ಲಿಯೇ ಅಭಿವೃದ್ಧಿ ಪಡಿಸಿದರು ಎಂದ ಅವರು  ಆಚಾರ್ಯರು ಮಾಡಿದ ಸತ್ಕಾರ್ಯಗಳಿಂದಲೇ ಅವರು ಇಂದಿಗೂ ನಮ್ಮ ಮಧ್ಯದಲ್ಲಿದ್ದಾರೆ ಎಂದರು.       

ಅಥಣಿಯಲ್ಲಿ ನಡೆಯುವ ಎಲ್ಲ ಧಾರ್ಮಿಕ, ಸಾಹಿತ್ಯಿಕ, ವೈಚಾರಿಕ, ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ಇವರು ಧಾರ್ಮಿಕ ಕಾರ್ಯಗಳೊಂದಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅಡಿವೇಶಾಚಾರ್ಯರು ಹೀಗಾಗಿಯೇ ಅವರು ಜನಾನುರಾಗಿಗಳಾಗಿದ್ದರು ಎಂದ ಅವರು ಇಂದಿನ ಯುವ ಪೀಳಿಗೆ ಅಡಿವೇಶಾಚಾರ್ಯರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಆಗ ಮಾತ್ರ ಅವರು ತಮ್ಮ ಕಾರ್ಯಗಳ ಮೂಲಕ ನಮ್ಮ ಮಧ್ಯೆ ಜೀವಂತವಾಗಿ ಉಳಿಯುತ್ತಾರೆ ಎಂದರು.        

ಇದೇ ಸಂದರ್ಭದಲ್ಲಿ ಸಂಧ್ಯಾ ಟೊಣಪಿ ಮತ್ತು ತೇಜಸ್ವಿನಿ ಕದಡಿ ರಚಿಸಿದ ಆಧ್ಯಾತ್ಮಿಕ ಜ್ಞಾನದ ಖಣಿ ಉಗಾಭೋಗಗಳು ಎನ್ನುವ ಗ್ರಂಥವನ್ನು ಪಂಡಿತೊತ್ತಮರು ಬಿಡುಗಡೆಗೊಳಿಸಿದರು.  ಜಮಖಂಡಿಯ ಶ್ರೀ ಲಕ್ಷ್ಮೀ ನರಸಿಂಹ ಸಂಸ್ಕೃತ ಮಹಾವಿದ್ಯಾಲಯದ ಪ್ರಾಂಶುಪಾಲ ಪಂ.ರಮಾಕಾಂತಾಚಾರ್ಯ ಜೋಶಿ, ಅಥಣಿಯ ಪಂ.ಬಿಂದುಮಾಧಾಚಾರ್ಯ ಜೋಶಿ, ಪಂ.ಜಯರಾಮಾಚಾರ್ಯ ಮದನಪಲ್ಲಿ, ಹುಬ್ಬಳ್ಳಿಯ ಪಂ.ಜಯತೀರ್ಥಾಚಾರ್ಯ ಹುಂಡೇಕಾರ, ಬೆಂಗಳೂರಿನ ಪಂ.ವೇಣುಗೋಪಾಲಾಚಾರ್ಯ ಗುಡಿ, ಪಂ.ಸಂದೇಶಾಚಾರ್ಯ ಝಳಕೀಕರ, ಪಂ.ಪವನಾಚಾರ್ಯ ಜೋಶಿ, ಧಾರವಾಡದ ಪಂ.ಕೇಶ್ವಾಚಾರ್ಯ ಕೆರೂರ, ಐನಾಪೂರ ದ ತತ್ವಜ್ಞಾಚಾರ್ಯ ಉಮರ್ಜಿ ಪ್ರವಚನ ನೀಡಿದರು.          

ಕಾರ್ಯಕ್ರಮದಲ್ಲಿ ಪಂಡಿತೊತ್ತಮರಿಗೆ ನರಸಿಂಹ ದೇವಸ್ಥಾನದ ಪರವಾಗಿ ಅಡಿವೇಶಾಚಾರ್ಯ ಜೋಶಿ ಕುಟುಂಬದವರು  ಗೌರವಿಸಿದರು. ಕಾರ್ಯಕ್ರಮದಲ್ಲಿ ಹಣಮಂರಾಚಾರ್ಯ ಕಟ್ಟಿ, ರೂಪಾ ಜೋಶಿ, ಗುರುರಾಜ ಬಾದರಾಯಣಿ, ಶ್ರೀರಾಮ ಕಟ್ಟಿ, ವಸಂತಾಚಾರ್ಯ ಜೋಶಿ,  ಗುರುರಾಜ ಮಣ್ಣೂರ, ವಾದಿರಾಜ ಜಂಬಗಿ ಸೇರುದಂತೆ ನೂರಾರು ಸಂಖ್ಯೆಯಲ್ಲಿ ಬ್ರಾಹ್ಮಣ ಸಮಾಜ ಬಂಧುಗಳು ಪಾಲ್ಗೊಂಡಿದ್ದರು.