ಸಂಬರಗಿ 17: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಭೀಕರ ಬರಗಾಲವಿದ್ದು ಜನ ಹೊಟ್ಟೆ ಹಾಗೂ ಬಟ್ಟೆಗಾಗಿ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಗೆ ಗುಳೆ ಹೋಗಿದ್ದಾರೆ. ಸಾಂಗಲಿ ಪಟ್ಟಣದ ಹತ್ತಿರವಿರುವ ಮೌಜೆಡಿಗ್ರಜ ಗ್ರಾಮದಲ್ಲಿ ಕೆಲಸ ಮಾಡಿ ಕೃಷ್ಣಾ ತೀರಕ್ಕೆ ಸ್ನಾನಕ್ಕೆ ಹೋದಾಗ ಮೊಸಳೆದಾಳಿಗೆ ಒಳಗಾಗಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಿಂಬಾಳ ಆರ್.ಎಸ್ ಗ್ರಾಮದ ಆಕಾಶ ಮಾರುತಿ ಜಾಧವ(12) ಗುರುವಾರ ಮೃತಪಟ್ಟಿದ್ದಾನೆ.
ಘಟನೆಯ ವಿವರ: ಇಂಡಿ ತಾಲೂಕಿನಲ್ಲಿ ಭೀಕರ ಬರಗಾಲವಿದ್ದು ಕುಡಿಯಲು ನೀರಿಲ್ಲ. ಜನರಿಗೆ ಕೆಲಸವಿಲ್ಲ. ಇಂತಹ ಪರಿಸ್ಥಿತಿ ಬಂದಾಗ ಈ ಭಾಗದ ಕಡು ಬಡಜನರು ಸಾಂಗಲಿ, ಸಾತಾರಾ, ಕೊಲ್ಹಾಪೂರ ಜಿಲ್ಲೆಗಳಿಗೆ ಕೆಲಸಕ್ಕೆ ಹೋಗುತ್ತಾರೆ. ಅದೇ ಪ್ರಕಾರ ನಿಂಬಾಳ ಆರ್.ಎಸ್ಗ್ರಾಮದ ಮಾರುತಿ ಜಾಧವ ತಮ್ಮ ಕುಟುಂಬ ಸಮೇತ ಇಟ್ಟಿಗೆ ಮಾಡಲು ಡಿಗ್ರಜ ಗ್ರಾಮಕ್ಕೆ ಹೋಗಿ ಬಾಳಾಸಾಬ ಲಾಂಡೆ ಎಂಬ ರೈತನ ತೋಟದಲ್ಲಿ ಇಟ್ಟಿಗೆ ಕೂಲಿ ಕೆಲಸ ಮಾಡುತ್ತಿದ್ದರು. ಬೆಳಗ್ಗಿನಿಂದ ಸಾಯಂಕಾಲದವರೆಗೆ ಕೆಲಸ ಮಾಡಿ ಮಧ್ಯಾಹ್ನ ಬಿಸಿಲಿನಲ್ಲಿ ಕೃಷ್ಣಾ ತೀರದಲ್ಲಿ ದಿನನಿತ್ಯ ಸ್ನಾನ ಮಾಡುತ್ತಿದ್ದರು. ಬುಧುವಾರ ತನ್ನ ಮಗನಾದ ಆಕಾಶ ಜಾಧವ ಗ್ರಾಮದ ಶಾಲೆಯ ಪರೀಕ್ಷೆ ಮುಗಿಸಿ ತಾಯಿ ತಂದೆಯ ಕಡೆಗೆ ಬಂದಿದ್ದ. ಗುರುವಾರ ಮದ್ಯಾಹ್ನ ಸ್ನಾನ ಮಾಡಲು ಹೋದಾಗ ಮೊಸಳೆ ದಾಳಿ ಮಾಡಿದ ನಂತರ ನೀರಿನಲ್ಲಿ ಎಳೆದುಕೊಂಡು ಹೋದಾಗ ನದಿ ತೀರದಲ್ಲಿರುವ ಜನರು ಬೊಬ್ಬೆ ಇಟ್ಟರು. ನಂತರ ಅಲ್ಲಿನ ಜನರು ಸೇರಿದರು. ದೋಣಿಯ ಮುಖಾಂತರ ಮಗುವನ್ನು ಹುಡುಕಾಟ ಪ್ರಾರಂಭಿಸಿದರು. ಆದರೆ ಆ ಮಗು ಸಿಗಲಿಲ್ಲ. ಶುಕ್ರವಾರ 1 ಗಂಟೆಗೆ ಕುಪವಾಡ ಗ್ರಾಮದ ಹೆಲ್ಪಲೈನ ಟೀಮನಿಂದ ಅವಿನಾಶ ಪವಾರ, ಜಮೀರ ಬೋರಗಾಂವೆ, ಮಯೂರ ಶಿತೋಳೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಯಾದ ಆರ್.ಎಸ್.ಪಾಟೀಲ, ಮನೋಜ ಕೋಳಿ ಇವರು 24 ಗಂಟೆ ನೀರಿನಲ್ಲಿ ಶೋಧ ಕಾಯರ್ಾಚರಣೆ ನಡೆಸಿದರು. ಆನಂತರ ಸುಮಾರು ಒಂದು ಗಂಟೆಗೆ ಈ ಮಗುವನ್ನು ಮೃತಾವಸ್ಥೆಯಲ್ಲಿ ಹೊರತೆಗೆಯಲಾಯಿತು.
ಘಟನಾ ಸ್ಥಳಕ್ಕೆ ಸಾಂಗಲಿ ಗ್ರಾಮೀಣ ಪೋಲಿಸ್ ಠಾಣೆಯ ಚಂದ್ರಕಾಂತ ಬೇಂದ್ರೆ ಇವರು ತಮ್ಮ ತಂಡದ ಜೊತೆ ಘಟನಾ ಸ್ಥಳಕ್ಕೆ ಆಗಮಿಸಿ ಪಂಚನಾಮೆ ಮಾಡಿದರು. ಈ ಕುರಿತು ಸಾಂಗಲಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.