ಉದ್ರಿಕ್ತ ಗುಂಪಿನಿಂದ 300 ಮೊಸಳೆಗಳ ಮಾರಣಹೋಮ


ಇಂಡೋನೇಷ್ಯಾ 16: ವ್ಯಕ್ತಿಯೊಬ್ಬನನ್ನು ಮೊಸಳೆ ಕೊಂದ ಪರಿಣಾಮ ರೊಚ್ಚಿಗೆದ್ದ ಜನರ ಗುಂಪು ಪ್ರತೀಕಾರ ಎಂಬಂತೆ ಕೊಡಲಿ, ಮಚ್ಚಿನೊಂದಿಗೆ ಆಗಮಿಸಿ ಬರೋಬ್ಬರಿ 300 ಮೊಸಳೆಗಳ ಮಾರಣಹೋಮ ನಡೆಸಿದ ಅಮಾನವೀಯ ಘಟನೆ ಇಂಡೋನೇಷ್ಯಾದಲ್ಲಿ ನಡೆದಿರುವುದಾಗಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. 

ತಾನು ಸಾಕಿದ್ದ ಜಾನುವಾರುಗಳಿಗೆ ಮೇವು ತರುವ ನಿಟ್ಟಿನಲ್ಲಿ ಸ್ಥಳೀಯ ಮೊಸಳೆ ಸಾಕಣೆ(ಮೊಸಳೆ ತಳಿ ಅಭಿವೃದ್ಧಿ) ಕೇಂದ್ರದತ್ತ ವ್ಯಕ್ತಿಯೊಬ್ಬ ಬಂದಿದ್ದ. ಈತ ಮೊಸಳೆ ಇದ್ದ ಜಾಗದಲ್ಲಿಯೇ ಬೆಳೆದಿದ್ದ ಹುಲ್ಲನ್ನು ಬಾಗಿ ತೆಗೆಯುತ್ತಿದ್ದ ವೇಳೆ ದಾಳಿ ನಡೆಸಿ ಕೊಂದು ಹಾಕಿದ್ದ ಘಟನೆ ಶನಿವಾರ ಸಂಭವಿಸಿತ್ತು. 

ಮೃತ ವ್ಯಕ್ತಿಯನ್ನು 48 ವರ್ಷ ಪ್ರಾಯದ ಸುಗಿಟೋ ಎಂದು ಗುರುತಿಸಲಾಗಿದೆ. ಒಂದು ಮೊಸಳೆ ಈತನ ಕಾಲನ್ನು ಕಚ್ಚಿ ನೀರಿನೊಳಗೆ ಎಳೆದೊಯ್ಯುತ್ತಿದ್ದಾಗ ಕೂಗಿಕೊಂಡ ಶಬ್ಧ ಕೇಳಿ ಫಾಮರ್್ ನಲ್ಲಿದ್ದ ಉದ್ಯೋಗಿಯೊಬ್ಬ ಸ್ಥಳಕ್ಕೆ ಹೋಗಿದ್ದ. ಅಷ್ಟರಲ್ಲಿ ಅಪಾಯ ಸಂಭವಿಸಿ ಆಗಿತ್ತು ಎಂದು ಇಂಡೋನೇಷ್ಯಾ ಸಂಪನ್ಮೂಲ ರಕ್ಷಣಾ ಏಜೆನ್ಸಿಯ ಬಸ್ಸಾರ್ ಮನುಲಾಂಗ್ ತಿಳಿಸಿದ್ದಾರೆ. 

ನಾವು ಸಂತ್ರಸ್ತ ಕುಟುಂಬದ ಜೊತೆ ಒಪ್ಪಂದ ಮಾಡಿಕೊಂಡು, ಅವರಿಗೆ ಸಾಂತ್ವನ ಹೇಳಿದ್ದೇವು. ಆದರೆ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನರ ಗುಂಪು, ಮಚ್ಚು, ಕತ್ತಿಯೊಂದಿಗೆ ದಾಳಿ ನಡೆಸಿ ಸುಮಾರು 300 ಮೊಸಳೆಗಳನ್ನು ಕೊಂದು ಹಾಕಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ. ನಾವು ಎಷ್ಟೇ ಪ್ರಯತ್ನಿಸಿದರೂ ಮೊಸಳೆ ಮಾರಣ ಹೋಮ ತಡೆಯಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. 

ಈ ಬಗ್ಗೆ ಕ್ರಿಮಿನಲ್ ಆರೋಪದಡಿಯಲ್ಲಿ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ ಎಂದು ತಿಳಿಸಿರುವ ಅಧಿಕಾರಿಗಳು ಈ ಘಟನೆಯಿಂದ ಅನಧಿಕೃತವಾಗಿ ಮೊಸಳೆ ಫಾಮರ್್ ನೊಳಗೆ ಪ್ರವೇಶಿಸುವುದು ಹಾಗೂ ಮೊಸಳೆಗಳ ರಕ್ಷಣೆಯ ಬಗ್ಗೆ ಹೆಚ್ಚು ಗಮನ ಕೊಡಬೇಕಾಗಿರುವುದನ್ನು ಮನದಟ್ಟು ಮಾಡಿಕೊಳ್ಳಬೇಕಾಗಿದೆ ಎಂದು ಮಾಧ್ಯಮದ ವರದಿ ಹೇಳಿದೆ.