ಬೈಲಹೊಂಗಲ 12: ಈಗ ರಾಜಿ ಮಾಡಿಸಿದ್ದಂಗ ವಿಧಾನಸಭಾ ಚುನಾವಣೆಯಲ್ಲಿ ರಾಜಿ ಮಾಡಿಸಿದ್ದೇರೆ ಏನಾಗುತ್ತಿತ್ತು. ನಮ್ಮ ಸಾಹೇಬ್ರೂ ಸೋಲಾಕ ನೀವೇ ಕಾರಣ. ನಿಮ್ಮ ಸ್ವಾರ್ಥ ಇಟ್ಟುಕೊಂಡು ಈಗ ಬಂದಿದ್ದೇರಿ. ಮುಂದಿನ ಎಂಎಲ್ಎ ಟಿಕೇಟ್ ನಮ್ಮ ಸಾಹೇಬ್ರ ಡಾ.ವಿಶ್ವನಾಥ ಪಾಟೀಲರಿಗೆ ಸಿಗುವಂತೆ ನೋಡಕೋ ಜವಾಬ್ದಾರಿ ನಿಮ್ದೂ ಎಂದು ಬಿಜೆಪಿ ಕಾರ್ಯಕರ್ತರು ಒಕ್ಕೂರುಲಿನಿಂದ ಆಗ್ರಹಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸಂಜೆ ನಡೆದ ಆರ್ಎಸ್ಎಸ್ ಬೈಠಕ್ ಸಭೆಯಲ್ಲಿ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯಥರ್ಿ ಸುರೇಶ ಅಂಗಡಿ, ಕಾಂಗ್ರೆಸ್ ವಿರೋಧಿ ಅಲೆಯಲ್ಲಿಯೂ ಬೈಲಹೊಂಗಲ ಮತಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಸೋಲಾಗಿದೆ. ಬೈಲಹೊಂಗಲ ಸಿಟ್ ಕಳೆದುಕೊಳ್ಳಬಾರದಿತ್ತು ನಾವೂ. ನಮ್ಮ ಜಗಳದಾಗ ಮೂರನೇ ವ್ಯಕ್ತಿಗೆ ಲಾಭವಾಗಿದೆ ಎಂದು ಮಾಡಿದ ಭಾಷಣದ ಧಾಟಿಗೆ ಕಾರ್ಯಕರ್ತರು ಈ ರೀತಿ ತಿರುಗೇಟು ನೀಡಿ ಹರಿಹಾಯ್ದರು.
ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅವರನ್ನು ಈ ಮೊದಲೇ ಏಕೆ ಹೊಂದಾಣಿಕೆ ಮಾಡಿಸಲಿಲ್ಲ. ಪಕ್ಷದ ವಿರುದ್ಧ ಚಟುವಟಿಕೆ ಮಾಡಿದವರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಂಡಿರಿ. ಇದು ಪಕ್ಷಕ್ಕೆ, ಕಾರ್ಯಕರ್ತರಿಗೆ ಮಾಡಿದ ದ್ರೋಹವಾಗಿದೆ. ಇನ್ನೂ ಮುಂದಾದರು ಇಬ್ಬರು ನಾಯಕರನ್ನು ಗಣನೆಗೆ ತೆಗೆದುಕೊಂಡು ಚುನಾವಣಾ ಕಾರ್ಯನಿರ್ವಹಿಸಿ. ನಮಗೆ ದೇಶ, ಪಕ್ಷ ಮುಖ್ಯ. ಇಬ್ಬರು ಮುಖಂಡರಲ್ಲಿರುವ ಭಿನ್ನಾಭಿಪ್ರಾಯ ಶೀಘ್ರ ಶಮನಗೊಳಿಸಿ ಬಿಜೆಪಿಯ ಪ್ರತಿಯೊಂದು ಕಾರ್ಯಗಳಲ್ಲಿ ಇಬ್ಬರು ಸಕ್ರೀಯವಾಗಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಿರಿ ಎಂದರು.
ಕಾರ್ಯಕರ್ತರ ಒತ್ತಡಕ್ಕೆ ಮಣಿದ ಸುರೇಶ ಅಂಗಡಿ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮಾತುಕತೆಯಾಗಿ ಇಬ್ಬರು ಒಂದಾದರೆ ಒಬ್ಬರನ್ನು ಎಂಎಲ್ಎ, ಇನ್ನೊಬ್ಬರನ್ನು ಎಂಎಲ್ಸಿ ಮಾಡುತ್ತೇವೆ ಅಂತಾ ಮಾತುಕತೆಯಾಗಿತ್ತ್ತು. ಇಬ್ಬರೂ ಒಪ್ಪಲಿಲ್ಲ. ಈಗ ಗಂಡಾ ಹೆಂಡತಿ ಜಗಳದಾಗ ಕೂಸ ಬಡವಾಯ್ತೂ ಅಂತಾರಲ್ಲ ಹಂಗಾಗಿದೆ ನನ್ನ ಪರಿಸ್ಥಿತಿ. ನನ್ನ ಮೇಲೆ ಆರೋಪ ಮಾಡಬೇಡಿ. ಇದಕ್ಕೆ ನಾ ಒಪ್ಪುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಡಾ.ವಿಶ್ವನಾಥ ಪಾಟೀಲ ಪರ ಚುನಾವಣಾ ಪ್ರಚಾರಕ್ಕೆ ಬಾರದೆ ಪರೋಕ್ಷವಾಗಿ ಪಕ್ಷೇತರ ಅಭ್ಯಥರ್ಿಗೆ ಬೆಂಬಲ ನೀಡಿದೀರಿ ಎಂದು ಕೆಲವರು ತೀವ್ರ ತರಾಟೆ ತೆಗೆದುಕೊಂಡರು. ಇಬ್ಬರು ನಾಯಕರುಗಳ ಜಗಳದಲ್ಲಿ ಬಿಜೆಪಿ ಪಕ್ಷ ಚುನಾವಣೆಯಲ್ಲಿ ಪರಾಭವಗೊಂಡಿತು. ಇದಕ್ಕೆ ಹಿರಿಯ ನಾಯಕರ ನಿರ್ಲಕ್ಷ್ಯವೇ ಮುಖ್ಯಕಾರಣ ಎಂದು ದೂಷಿಸಿದರು.
ಕಾರ್ಯಕರ್ತರೊಬ್ಬರು ಮಾತನಾಡಿ, ಪಕ್ಷದ ಟಿಕೆಟ್ ಒಬ್ಬರಿಗೆ ನೀಡಿದಾಗ ಇನ್ನೊಬ್ಬರನ್ನು ಹಿಂಪಡೆಯುವಂತೆ ತಿಳಿಸಬೇಕಿತ್ತು ಎಂದು ಪ್ರಶ್ನಿಸಿದರು. ನನ್ನ ವಿರುದ್ಧ 57 ಮಂದಿ ನಿಂತಿದ್ದಾರೆ. ನೀವು ಬಿಡಿಸ್ರೀ ನೋಡೂನಾ ಎಂದು ಅಂಗಡಿ ಪ್ರಶ್ನಿಸಿದರು. ಆಗ ಒಬ್ಬರು ಎದ್ದು ನಿಂತು ನಿಮ್ಮ ವಿರುದ್ಧ ನಿಂತವರು ನಮ್ಮ ಪಕ್ಷದವರು ಅಲ್ವಲಾ ಎಂದಾಗ ಹಾಸ್ಯದ ಹೊನಲು ಹರಿಯಿತು. ಬರೀ ನಾಲ್ಕೂ ಸಿಟ್ ಬಂದಿದ್ದರೆ ರಾಜ್ಯದಲ್ಲಿ ಬಿಜೆಪಿ ಸಕರ್ಾರ ರಚನೆಯಾಗುತ್ತಿತ್ತು. ಲಕ್ಷ್ಮಣ ಸವದಿ, ಸಂಜಯ ಪಾಟೀಲ, ವಿಶ್ವನಾಥ ಪಾಟೀಲ ಆರಿಸಿ ಬರೋವವರ ಲಿಸ್ಟ್ನಲ್ಲಿದ್ದರು. ರಾಜು ಕಾಗೆ ಒಬ್ಬರದೆ ಡೌಟ್ ಇತ್ತು. ದಯಮಾಡಿ ಪೋಸ್ಟ್ ಮಾಟಮ್ ಮಾಡಬೇಡಿ. ಅಲ್ಲಿಂದ ಬಂದ ಇಲ್ಲಿ ಹೇಳೋದು, ಇಲ್ಲಿದ ಅಲ್ಲಿ ಹೇಳೋದು ಬಿಡರಿ. ಎಲ್ಲರೂ ಒಂದಾಗಿರಿ ಎಂದು ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ದೇಶದ ಸುಭದ್ರತೆಗೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕಿದೆ. ಈ ನಿಟ್ಟಿನಲ್ಲಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು, ಮುಖಂಡರು ಶ್ರಮಿಸಬೇಕು. ಚೌಕಿದಾರರಾಗಿ ಕೆಲಸ ಮಾಡಬೇಕು. ಇಬ್ಬರು ಮುಖಂಡರು ಸೇರಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವುದಾಗಿ ತಿಳಿಸಿದರು.
ಉಪಾಧ್ಯಕ್ಷ ವಿದ್ಯಾಭಾರತಿ ಪ್ರಾಂಥ, ಕ್ಷೇತ್ರ ಸಂಯೋಜಕ ಅಶೋಕ ಶಿಂತ್ರಿ, ಜಗದೀಶ ಹಿರೇಮನಿ, ತಾಲ್ಲೂಕು ಸಂಯೋಜಕ ಯಲ್ಲಪ್ಪ ದೇವರಹುಬ್ಬಳ್ಳಿ, ಮಂಡಲ ಅಧ್ಯಕ್ಷ ಮಡಿವಾಳಪ್ಪ ಹೋಟಿ, ನೂರಾರು ಕಾರ್ಯಕರ್ತರು ಇದ್ದರು.