’ದೃಷ್ಟಿ ಬದಲಾದರೆ ಸೃಷ್ಟಿ ಬದಲಾದೀತು’- ಭಾರತ ಸೇವಾದಳ ಸಂಘಟಕ ಬಸವರಾಜ ಗುರಿಕಾರ
ಹಾವೇರಿ 04: ತಾಲೂಕಿನ ದೇವಗಿರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜಯಂತಿ ಹಾಗೂ ಭಾರತ ಸೇವಾದಳ ಘಟಕದ ಉದ್ಘಾಟನೆ ಹಾಗೂ ಸೇವಾದಳ ಸಂಸ್ಥಾಪನ ದಿನದ ಸಪ್ತಾಹದ ಅಂಗವಾಗಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಸೇವಾದಳ ಜಿಲ್ಲಾ ಘಟಕದ ಸಂಘಟಕರಾದ ಬಸವರಾಜ ಗುರಿಕಾರ ಸೇವಾದಳವು ವಿದ್ಯಾರ್ಥಿಗಳಲ್ಲಿ ಶಿಸ್ತು,ಸಂಯಮ ಹಾಗೂ ದೇಶಪ್ರೇಮ ಬೆಳಸುವಲ್ಲಿ ಪ್ರಮುಖವಾಗಿದೆ. ದೃಷ್ಟಿ ಬದಲಾದರೆ ಸೃಷ್ಟಿಯು ಕೂಡ ಬದಲಾದೀತು ಎಂಬಂತೆ ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕತ್ವ, ಸಹಬಾಳ್ವೆ ಹಾಗೂ ವ್ಯಕ್ತಿತ್ವದ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳನ್ನು ಭಾರತ ಸೇವಾದಳವು ಆಯೋಜಿಸುತ್ತಿದೆ. ಇಂದು ಶಾಲೆಯಲ್ಲಿ ಭಾರತ ಸೇವಾದಳದ ಸಪ್ತಾಹದ ನಿಮಿತ್ತ ರಂಗೋಲಿ, ಚಿತ್ರಕಲೆ, ಕ್ವಿಜ್ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಏರಿ್ಡಸಿ ವಿಜೇತರಿಗೆ ಬಹುಮಾನ ವಿತರಿಸುವ ಈ ಸುಸಂದರ್ಭದಲ್ಲಿ ಸಮಾಜ ಸುಧಾರಕರು ಹಾಗೂ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ದೇಶಕ್ಕೆ ಮಾದರಿಯಾದ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸುತ್ತಿರುವುದು ನನ್ನ ಭಾಗ್ಯ ಎಂದರು. ಭಾರತ ಸೇವಾದಳದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಕಾಂತ ದೊಡ್ಡಕುರುಬರ ಮಾತನಾಡಿ ವಿದ್ಯೆಗೆ ವಿನಯವೇ ಭೂಷಣ ಎನ್ನುವಂತೆ ಭಾರತ ಸೇವಾದಳವು ಶಿಸ್ತು,ಶಾಂತಿ ಹಾಗೂ ದೇಶಪ್ರೇಮ ಬೆಳೆಸುವಲ್ಲಿ ನೂರಕ್ಕೂ ಹೆಚ್ಚು ವರ್ಷಗಳಿಂದ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿದ್ದು, ಶಾಲಾ ಹಂತದಲ್ಲಿ ಇನ್ನಷ್ಟು ಸೇವಾದಳ ಚಟುವಟಿಕೆಗಳನ್ನು ಹಮ್ಮಿಕೊಂಡು ಸೇವೆಗಾಗಿ ಬಾಳು ಎಂಬ ಧ್ಯೇಯ ವಾಕ್ಯವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು ಎಂದರು. ನಂತರ ಸಾವಿತ್ರಿಬಾಯಿ ಫುಲೆ ಅವರ ಕುರಿತು ಮಾತನಾಡಿದರು.
ಶಿಕ್ಷಕ ಮಂಜುನಾಥ ಬಿಷ್ಟನಗೌಡರ ಬ್ರಿಟಿಷರ ಆಳ್ವಿಕೆಯ ಸಂದರ್ಭದಲ್ಲಿ ಸಾಕಷ್ಟು ಸವಾಲುಗಳನ್ನು ಮೆಟ್ಟಿ ಅಂದಿನ ಜಾತಿ, ಧರ್ಮ ಮತ್ತು ಲಿಂಗ ತಾರತಮ್ಯಗಳನ್ನು ಸವಾಲಾಗಿ ಸ್ವೀಕರಿಸಿ ಸರ್ವರಿಗೂ ಶಿಕ್ಷಣ ದೊರೆಯಬೇಕೆಂದು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ದೇಶಕ್ಕೆ ಮಾದರಿಯಾದ ಶಿಕ್ಷಕಿ ಹಾಗೂ ಸಮಾಜ ಸುಧಾರಕರಾದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಭಾರತ ಸೇವಾದಳದ ವತಿಯಿಂದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಶಾಲೆಗಳಲ್ಲಿ ನಡೆಸಿರುವುದು ಇಂದು ವಿಶೇಷವಾಗಿದೆ ಎಂದರು. ಮುಖ್ಯೋಪಾಧ್ಯಾಯ ಎಸ್ ಎನ್ ಅಣ್ಣಿಗೇರಿ ಮಾತನಾಡಿ ಇಂದು ಶಾಲೆಯಲ್ಲಿ ಸಾವಿತ್ರಿಬಾಯಿ ಪುಲೆ ಜಯಂತಿ ಜೊತೆಗೆ ಭಾರತ ಸೇವಾದಳದ ಜಿಲ್ಲಾ ಘಟಕದಿಂದ ವಿಶೇಷ ಕಾರ್ಯಕ್ರಮ ನಡೆಸಿರುವುದು ಸಂತಸವನ್ನುಂಟು ಮಾಡಿದ್ದು ಭಾರತ ಸೇವಾದಳದ ಸಂಘಟಕರು, ಎಸ್ ಡಿ ಎಂ ಸಿ, ಅತಿಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಎಸ್ ಡಿ ಎಂ ಸಿ ಅಧ್ಯಕ್ಷ ಕನ್ನಪ್ಪ ಚನ್ನಾಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್ ಡಿ ಎಂ ಸಿ ಉಪಾಧ್ಯಕ್ಷೆ ರತ್ನ ಕಲ್ಲೇದೇವರ, ಸದಸ್ಯ ಕೃಷ್ಣಸಿಂಗ್ ಅಮರಗೋಳ, ಶಿಕ್ಷಕರಾದ ಎಚ್ ಬಿ ಕಟ್ಟಿಮನಿ, ಎನ್.ಎನ್.ಕಾಳಿ, ಮಮತಾ ಜಿ.ಎ. ಶಿಲ್ಪಾ ಪುರದ ಸೇರಿದಂತೆ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು. ಶಿಕ್ಷಕ ಮಹಾಂತೇಶ ಕುಂಬಾರಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ಮುಖ್ಯೋಪಾಧ್ಯಾಯ ಸುರೇಶ ಅಣ್ಣಿಗೇರಿ ಸ್ವಾಗತಿಸಿದರು. ಶಿಕ್ಷಕಿ ಉಮಾ ಕೆಂಚಕ್ಕನವರ ನಿರೂಪಿಸಿದರು. ಸೇವಾದಳದ ಶಾಲಾ ಉಸ್ತುವಾರಿ ಶ್ರೀಮತಿ ಎಂ.ಎಚ್.ಪಾಟೀಲ ವಂದಿಸಿದರು.