ರಾಯಚೂರು 06: ಸದ್ಯಕ್ಕೆ ಮುಖ್ಯಮಂತ್ರಿಗಳು ಇದ್ದಾರೆ. ಸಿಎಂ ಬದಲಾವಣೆ ವಿಚಾರ ಬರುವುದಿಲ್ಲ. 2028ಕ್ಕೆ ನಾನೇ ಸಿಎಂ ಅಭ್ಯರ್ಥಿ ಎಂದು ಹೇಳಿದ್ದೇನೆ. ಕಾದು ನೋಡಬೇಕು ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ರಹಸ್ಯ ಸಭೆ ಏನು ಇರಲಿಲ್ಲ. ಎಲ್ಲರೂ ಕೂಡಿಯೇ ಸಭೆ ಮಾಡಿದ್ದು, ರಹಸ್ಯ ಸಭೆ ಎನ್ನುವ ಪ್ರಶ್ನೆಯೇ ಇಲ್ಲ. ಅದು ಊಟದ ಸಭೆ ಅಷ್ಟೇ. ಸಭೆಯಲ್ಲಿ ಅಂಥದ್ದೇನು ಚರ್ಚೆ ಯಾವುದು ಆಗಿಲ್ಲ. ಸಂಪುಟ ವಿಸ್ತರಣೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಸ್ ದರ ಏರಿಕೆಗೆ ಬಿಜೆಪಿಯವರು ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಹಣಕಾಸು ಸಚಿವ ಹಳೆಗಾಡಿಗಳಿಗೆ ಶೇ.18ರಷ್ಟು ಜಿಎಸ್ ಟಿ ಹಾಕಿದ್ದಾರೆ ಅದರ ಬಗ್ಗೆ ಪ್ರತಿಭಟನೆ ಇಲ್ಲ. ಬರೀ ರಾಜ್ಯದ ಬಸ್ ದರ ಒಂದೇ ನೋಡಿದರೆ ಹೇಗೆ ಎಂದು ಪ್ರಶ್ನಿಸಿದರು.
ಹಿಂದಿನ ಸರ್ಕಾರ ಬಜೆಟ್ ಸಪೋರ್ಟ್ ಇಲ್ಲದೆ ಕೆಲಸ ಮಾಡಿದ್ದಾರೆ. 1000 ಕೋಟಿ ಬಜೆಟ್ ಇದೆ. ಸಾವಿರ ಕೋಟಿ ಕೆಲಸ ಆಗಿದ್ದರೆ ಅದು ಬಿಡುಗಡೆ ಮಾಡಬೇಕು. 1000 ಕೋಟಿ ಬಜೆಟ್ ಇಟ್ಟುಕೊಂಡು 3 ಸಾವಿರ ಕೋಟಿ ಕೆಲಸ ಮಾಡಿದ್ದರೆ ಹೇಗೆ ಆಗುತ್ತದೆ. ಫೈನಾನ್ಸ್ ಸಪೋರ್ಟ್ ಇಲ್ಲದೆ ಕೆಲಸ ಮಾಡಿದ್ದಾರೆ. ಹೀಗಾಗಿ ಬಿಲ್ ಗಳು ಕೊಡಲು ತಡವಾಗುತ್ತಿದೆ ಎಂದರು.
ನಮ್ಮ ಸರ್ಕಾರ ಬಂದ ಬಳಿಕ ಅಭಿವೃದ್ಧಿ ಕೆಲಸಗಳು ನಡೆದಿವೆ. ರಾಜ್ಯದಲ್ಲಿ ಶೇ.60ರಷ್ಟು ಪರ್ಸೆಂಟೇಸ್ ಸರ್ಕಾರ ಎಂದು ಬಿಜೆಪಿಯವರು ಆರೋಪ ಮಾಡುತ್ತಾರೆ. ಬರೀ ಆರೋಪ ಮಾಡುವುದಲ್ಲ. ಅದನ್ನು ಸಾಬೀತು ಮಾಡಬೇಕು. ಪತ್ರದಲ್ಲಿ ಪ್ರಿಯಾಂಕ ಖರ್ಗೆ ಆಪ್ತನ ಹೆಸರಿದೆ. ಈಶ್ವರಪ್ಪನದ್ದು ನೇರವಾಗಿ ಪತ್ರದಲ್ಲಿ ಹೆಸರು ಉಲ್ಲೇಖವಾಗಿತ್ತು. ಆಪ್ತರು, ಪಿಎಗಳ ಹೆಸರು ಇದ್ದರೆ ಸಚಿವರು ನೇರವಾಗಿ ಹೊಣೆಗಾರರು ಆಗಲ್ಲ. ತನಿಖೆ ನಡೆಯುತ್ತಿದೆ ನಡೆಯಲಿ ಎಂದರು.