100 ದಿನ ಪೂರೈಸಿದ ಖುಷಿಯಲ್ಲಿ ನಿರ್ಮಾಪಕರಿಂದ ‘ಸಲ್ಯೂಟ್‌’

ಲೋಕದರ್ಶನ ವರದಿ 

ತಂದೆ ಮಕ್ಕಳ ಬಾಂಧವ್ಯದ ಕಥೆ ಹೊಂದಿರುವ ‘ಸಲ್ಲೂಟ್‌’ ಸಿನಿಮಾ ಮೇ 24ರಂದು ತೆರೆಗೆ ಬಂದು, ಇದೀಗ ಕೆಲವು ಥಿಯೇಟರ್‌ನಲ್ಲಿ 100ದಿನ ಪೂರೈಸಿದೆ. ಸಮಾಜಿಕ ಜವಾಬ್ದಾರಿಯ ಜೊತೆಗೆ ತಂದೆ-ತಾಯಿ, ಮಕ್ಕಳಿಗೆ ಉತ್ತಮವಾದ ಸಂದೇಶವಿರುವ ಚಿತ್ರವನ್ನು ಶಾಲಾ ಮಕ್ಕಳು ಹೆಚ್ಚಾಗಿ ಇಷ್ಟ ಪಡುತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ ಬರೆದು ನಿರ್ದೇಶನದ ಜೊತೆಗೆ ಶ್ರೀ ಬಾಲಾಜಿ ಈಶ್ವರ್ ಕ್ರಿಯೇಷನ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿದ್ದಾರೆ ಭರತ್ ಬಾಬು ಎಲ್‌. ತಮ್ಮ ಮತ್ತು ಚಿತ್ರರಂಗದ ನಂಟಿನ ಬಗ್ಗೆ ಮಾತನಾಡುವ ನಿರ್ಮಾಪಕರು ‘ನಾನು ಸುಮಾರು 25 ವರ್ಷಗಳಿಂದ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದು, ಹಲವಾರು ಚಿತ್ರಗಳಿಗೆ ಸಹ, ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಚಿತ್ರರಂಗಕ್ಕೆ ಬರುವ ಮೊದಲು ಇಂಡಿಯನ್ ಆರ್ಮಿಯಲ್ಲಿ 7ವರ್ಷ ಸೇವೆ ಸಲ್ಲಿಸಿದ್ದೇನೆ. ಸಿನಿಮಾ ಮೇಲಿನ ಆಸಕ್ತಿಯಿಂದ ಸೈನಿಕ ವೃತ್ತಿಗೆ ರಾಜಿನಾಮೆ ನೀಡಿ, ಚೆನ್ನೈನಲ್ಲಿರುವ ಅಣ್ಣ ಫಿಲ್ಮ ಇನ್ಸಿ-್ಟಟ್ಯೂಟ್‌ನಲ್ಲಿ ನಿರ್ದೇಶಕ ಕೋರ್ಸ ಮುಗಿಸಿದೆ. ನಂತರ ಸಂಕಲನ ವಿಭಾಗದಲ್ಲಿ ತರಬೇತಿ ಪಡೆದು, ಕನ್ನಡ, ತಮಿಳು, ತೆಲುಗು ನಿರ್ದೇಶಕ ಜೊತೆ ಕೆಲಸ ಕಲಿತೆ. ಮೊದಲ ಪ್ರಯತ್ನವಾಗಿ ‘ಸಲ್ಯೂಟ್‌’ ಚಿತ್ರವನ್ನು ನಿರ್ಮಾಣದ ಜೊತೆಗೆ ನಿರ್ದೇಶನ ಮಾಡಿದ್ದೇನೆ’ ಎಂದು ಹೇಳುವರು.  

‘ಸಲ್ಯೂಟ್‌’ ಸಕ್ಸಸ್ ಬಗ್ಗೆ ಮಾತನಾಡುವ ನಿರ್ದೇಶಕರು ‘ಪ್ರೇಕ್ಷಕರ ಪ್ರೋತ್ಸಾಹದಿಂದ ‘ಸಲ್ಯೂಟ್‌’ ಸಿನಿಮಾ 75 ದಿನ ಪೂರೈಸಿದಾಗ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಮಾಡಿ ಕಲಾವಿದರು, ತಂತ್ರಜ್ಞರಿಗೆ ಸನ್ಮಾನಿಸಿ ನೆನಪಿನ ಫಲಕಗಳನ್ನು ನೀಡಲಾಯಿತು. ಈಗ ನಮ್ಮ ಸಿನಿಮಾ 100 ದಿನ ಪೂರೈಸಿದೆ. ಸಿನಿಮಾ ಕಥೆ ಬಗ್ಗೆ ಹೇಳುವುದಾದರೆ, ಇದು ತಂದೆ ಮಕ್ಕಳ ಬಾಂಧವ್ಯದ ಚಿತ್ರ. ಮಕ್ಕಳಿಗೆ ತಾಯಿ ಪ್ರೀತಿ ತಕ್ಷಣ ಗೊತ್ತಾಗುತ್ತದೆ. ಆದರೆ ತಂದೆ ಪ್ರೀತಿ ಮಕ್ಕಳು ಬೆಳೆದು ತಂದೆಯಾದಮೇಲೆ ಗೊತ್ತಾಗೊದು. ಅಷ್ಟರಲ್ಲಿ ತಂದೆ ಜೀವಂತವಾಗಿ ಇರ್ತಾರೋ ಇಲ್ಲವೋ ಗೊತ್ತಿಲ್ಲ. ತಂದೆ ಜೀವಂತವಾಗಿ ಇರೋವಾಗ್ಲೇ ಅವರನ್ನು ಪ್ರೀತಿ ಮಾಡಿ. ಅವರು ಸತ್ತಮೇಲೆ ನೀವು ಎಷ್ಟೇ ಕಣ್ಣಿರು ಸುರಿಸಿದರೂ ಬರುವುದಿಲ್ಲ. ಇವತ್ತು ನೀನು ಮಗ ನಾಳೆ ನೀನು ತಂದೆ ಆಗ್ತೀಯಾ ಅನ್ನೋದನ್ನು ಮರೆಯಬೇಡ’ ಎನ್ನುವರು. 

ಅಂದಂಗೆ ಚಿತ್ರಕ್ಕೆ ಮ್ಯಾನುಯೆಲ್ ಜಯಶೀಲ್‌.ಜೆ ಸಂಗೀತ, ಚೆನ್ನಕೇಶವ.ಸಿ ಛಾಯಾಗ್ರಹಣವಿದೆ. ಮುಖ್ಯಪಾತ್ರಗಳಲ್ಲಿ ಮಾಸ್ಟರ್ ಪರಿಣಿತ್ ಎಂ, ಶಿವ ಕಾರ್ತಿಕ್, ಕಾರ್ತಿಕ್ ತಳಕಲ್, ಕಪ್ಪೆರಾಯ (ಫಕ್ಕೀರ​‍್ಪ ದೊಡ್ಡಮನಿ), ಶಿಲ್ಪಾ ನಾಯ್ಕ್‌, ನವ್ಯ ಶ್ರೀ, ಗೀತಾ, ಪುರುಷೋತ್ತಮ್ (ಓಂಕರ್), ಭರತ್ ಬಾಬು.ಎಲ್, ವಿಕ್ಟರ್ - ದಯಾಳನ್ ಮುಂತಾದವರು ಇದ್ದಾರೆ.