‘ಮುರಗುಂಡಿ ಸರಕಾರಿ ಪ್ರೌಢ ಶಾಲೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ’

'Muragundi Government High School is doing well'

ಅಥಣಿ 22: ಮುರಗುಂಡಿ ಸರಕಾರಿ ಪ್ರೌಢ ಶಾಲೆ ನಗರ ಮಟ್ಟದ ಖಾಸಗಿ ಕಾನ್ವೆಂಟ್ ಶಾಲೆಗಳಿಗಿಂತಲೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಉದ್ಯಮಿ, ಅಥಣಿ ಪುರಸಭಾ ಸದಸ್ಯ ರಾವಸಾಹೇಬ ಐಹೊಳೆ ಹೇಳಿದರು.       

ಅವರು ಗ್ರಾಮದ ಸರಕಾರಿ ಪ್ರೌಢ ಶಾಲೆಯ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಮುರಗುಂಡಿ ಗ್ರಾಮದ ಗ್ರಾಮಸ್ಥರು ಸರಕಾರಿ ಪ್ರೌಢ ಶಾಲೆಯ ಅಭಿವೃದ್ಧಿಗೆ ತನು, ಮನ, ಧನದಿಂದ ಸಹಾಯ ಸಹಕಾರ ಮಾಡುತ್ತಿರುವುದು ನಮಗೆಲ್ಲ ಮಾದರಿ ಎಂದ ಅವರು ಮುರಗುಂಡಿಯಲ್ಲಿಯೇ ಶಿಕ್ಷಣ ಪಡೆದ ಅನೇಕ ಮಹನೀಯರು ಉನ್ನತ ಸ್ಥಾನದಲ್ಲಿದ್ದು, ಅವರೂ ಕೂಡ ಶಾಲೆಯ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವುದು ಅಭಿನಂದನಾರ್ಹ ಎಂದರು.         

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಯುವ ಧುರೀಣ ರಮೇಶ ಸಿಂದಗಿ,  ಮುರಗುಂಡಿಯ ಸರಕಾರಿ ಶಾಲೆಯಲ್ಲಿ ಮುಖ್ಯಾಧ್ಯಾಪಕರು, ಶಿಕ್ಷಕರು, ಪಾಲಕರು ಮತ್ತು ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಲ್ಲಿ ಹೊಂದಾಣಿಕೆ ಇರುವುದರಿಂದಲೇ ಶಾಲೆ ಸಮಗ್ರ ಅಭಿವೃದ್ಧಿಯಾಗಿದೆ ಎಂದ ಅವರು ವಿದ್ಯಾರ್ಥಿಗಳು ದಿನಚರಿ ಪಾಲಿಸಬೇಕು ಆಗ ಮಾತ್ರ ಶೈಕ್ಷಣಿಕವಾಗಿ ಯಶ ಪಡೆಯಲು ಸಾಧ್ಯ ಎಂದರು. ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಸಂಸದೀಯ ಅನುದಾನದಲ್ಲಿ ಮುರಗುಂಡಿ ಶಾಲೆಗೆ ಬೆಂಚಗಳ ಖರೀದಿಗಾಗಿ ಅನುದಾನ ಕೊಡಿಸುವುದಾಗಿ ಹೇಳಿದ ಅವರು ಜಿಲ್ಲಾ ಉಸ್ತೂವಾರಿ ಸಚಿವರ ಗಮನಕ್ಕೆ ತಂದು ಸಭಾ ಭವನಕ್ಕಾಗಿ ಮಂಜೂರು ಮಾಡಿ ಕೊಡುವುದಾಗಿ ಹೇಳಿದರು.        

ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅಥಣಿ ಪುರಸಭಾ ಸದಸ್ಯೆ ಮೃಣಾಲಿನಿ ದೇಶಪಾಂಡೆ, ಸರಕಾರಿ ಶಾಲೆಯ ಅಭಿವೃದ್ಧಿಯಲ್ಲಿ ಶಿಕ್ಷಕರ ಜೊತೆಗೆ ಗ್ರಾಮದ ಗ್ರಾಮಸ್ಥರ ಸಹಕಾರವೂ ಅಗತ್ಯ ಎಂದ ಅವರು ಮುರಗುಂಡಿ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರತಿಭೆ ಹೆಚ್ಚಿಸಲು ನಗದು ಬಹುಮಾನ ನೀಡುತ್ತಿರುವುದು ಇತರರಿಗೆ ಮಾದರಿ ಎಂದರು.       

 ಕಲಾವಿದ, ಶಾಲೆಯ ಹಳೆಯ ವಿದ್ಯಾರ್ಥಿ ಸುರೇಶ ವಾಘಮೋಡೆ ಮಾತನಾಡಿ, ಮುರಗುಂಡಿ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರತಿಭೆ ಹೆಚ್ಚಿಸಲು ಕಾರಣೀಕರ್ತರಾದ ಶಾಲೆಯ ಶಿಕ್ಷಕ ವೃಂದವೇ ಕಾರಣ ಎಂದ ಅವರು ಶಿಕ್ಷಕರು ತನು, ಮನ, ಧನದಿಂದ ಸಹಕಾರ ನೀಡುತ್ತಿರುವುದು ಅಭಿನಂದನಾರ್ಹ ಎಂದರು.       

ಮುಖ್ಯಾಧ್ಯಾಪಕ ರವೀಂದ್ರ ಕಡಾಕಡಿ ಮಾತನಾಡಿ, ಸರಕಾರಿ ಶಾಲೆಯ ಬೆಳವಣಿಗೆಯಲ್ಲಿ ಮುರಗುಂಡಿ ಗ್ರಾಮದ ಗ್ರಾಮಸ್ಥರ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು,  ಗ್ರಾಮ ಪಂಚಾಯತ ಆಡಳಿತ ಮಂಡಳಿ ಮತ್ತು ಶಾಲೆಯ ಹಳೆಯ ವಿದ್ಯಾರ್ಥಿಗಳ ಸಹಯೋಗ ಮತ್ತು ಸಹಕಾರವೇ ಮುಖ್ಯ ಕಾರಣ ಎಂದ ಅವರು ಶಾಲಾ ಅಭಿವೃದ್ಧಿ ಸಮಿತಿಯ ಸದ್ಯದ ಅಧ್ಯಕ್ಷರಾದ ಮಕಬುಲ್ ನದಾಫ ಇವರ ಸತತ ಪ್ರಯತ್ನದ ಫಲವಾಗಿಯೇ ಶಾಲೆ ಸರ್ವಾಂಗೀಣ ಅಭಿವೃದ್ಧಿಯಾಗಿದೆ ಎಂದರು.       

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಕಬುಲ್ ನದಾಫ ವಹಿಸಿದ್ದರು.  ಗ್ರಾಮ ಪಂಚಾಯತ ಅಧ್ಯಕ್ಷೆ ಅಶ್ವಿನಿ ಕಾಟಕರ, ಉಪಾಧ್ಯಕ್ಷೆ  ಶೋಭಾ ಪಾಟೀಲ, ಪಿಡಿಒ ಸಂತೋಷ ನಿಡೋಣಿ, ಧುರೀಣರಾದ ರವೀಂದ್ರ ಶೇಷುಗೋಳ, ಕುಮಾರಗೌಡ ಪಾಟೀಲ, ತವನಪ್ಪ ಮಹೇಷವಾಡಗಿ, ನಿಂಗಪ್ಪ ಪರಮಾನಟ್ಟಿ, ಎಮ್‌.ಎಸ್‌.ಮಳಮಳಸಿ, ಸಂಜೀವ ಸನದಿ, ಮುತ್ತಪ್ಪಾ ಮಗಾಡಿ, ರಮೇಶ ಕುಸನಾಳೆ,  ನಿವೃತ್ತ ಮುಖ್ಯಾಧ್ಯಾಪಕ ಕೆ.ಎ.ಶಿರಗಾಂವಕರ, ಸುರೇಶ ವಾಘಮೋಡೆ, ಕುಮಾರ ಗಸ್ತಿ, ಎಸ್‌.ಬಿ.ಸಜ್ಜನ ವರದಿ ವಾಚನ ಓದಿದರು.  ಜಿ.ಎಮ್‌.ಅತ್ತಾರ ಸರ್ವರನ್ನು ಸ್ವಾಗತಿಸಿದರು,  ವಿವಿಧ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜಯಶಾಲಿಯಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.  ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.