'ಇತಿಹಾಸದ ಅರಿವು ಇಲ್ಲದವರು ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ

ಲೋಕದರ್ಶನ ವರದಿ

ಕೊಪ್ಪಳ 22: ಇತಿಹಾಸದ ಅರಿವು ಇಲ್ಲದವರು ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ಕನರ್ಾಟಕ ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ಆರ್.ಎಂ.ಷಡಕ್ಷರಯ್ಯ ಹೇಳಿದರು.

ಅವರು ತಾಲ್ಲೂಕಿನ ಇರಕಲ್ಲಗಡ ಗ್ರಾಮದ ಪ್ರಥಮ ದಜರ್ೆ ಕಾಲೇಜಿನಲ್ಲಿ ಜಿಲ್ಲಾ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಹಮ್ಮಿಕೊಂಡಿದ್ದ ಇತಿಹಾಸ ತಜ್ಞ ಲಿಂ.ಬಿ.ಸಿ.ಪಾಟೀಲ ದತ್ತಿ ಉಪನ್ಯಾಸ ಮತ್ತು ಲಿಂ.ಮರಿಗೌಡ ಮಲ್ಲನಗೌಡ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಕೊಪ್ಪಳ ಜಿಲ್ಲೆ ಜೈನರ, ಬೌದ್ಧರ ಬಹುದೊಡ್ಡ ಕೇಂದ್ರ ಆದಿ ಮಾನವನ ಇತಿಹಾಸದಿಂದ ಹಿಡಿದು ರಾಜ, ಮಹಾರಾಜರ ಆಳ್ವಿಕೆ ಒಳಗಾದ ನೆಲ. ಇಲ್ಲಿನ ಸ್ಮಾರಕಗಳು, ಶಿಲಾಶಾಸನಗಳು ತಮ್ಮದೇ ಆದ ವಿಶೇಷತೆಯನ್ನು ಹೊಂದಿವೆ. ಇತಿಹಾಸದ ಮೇಲೆ ಬೆಳಕು ಚೆಲ್ಲಿವೆ ಎಂದು ಅಭಿಪ್ರಾಯಪಟ್ಟರು. ಪ್ರಭುತ್ವದ ಅಡಿಯಲ್ಲಿ ಬೆಳೆದ ಧರ್ಮಗಳು, ಆಯಾ ರಾಜರ ಕಾಲದಲ್ಲಿ ಅವರ ಧರ್ಮಗಳು ಬೆಳವಣಿಗೆ ಹೊಂದಿದವು. ಉಳಿದ ಧರ್ಮಗಳು ಅವಗಣನೆಗೆ ಒಳಗಾದವು. ಇದರಿಂದ ಸಮೃದ್ಧ ಐತಿಹಾಸಿಕ ಪರಂಪರೆಗಳು ನಶಿಸಿ ಹೋಗಿವೆ. ಗಂಗಾವತಿ ತಾಲ್ಲೂಕಿನ ಬೆಣಕಲ್ಲಿನ ಮೊರೇರ ಶಿಲಾಸಮಾಧಿಗಳು ವಿದೇಶಿಗರನ್ನು ಸೆಳೆಯುವ, ಬಗೆದಷ್ಟು ಐತಿಹಾಸಿಕ ಪುರಾವೆಗಳು ಈ ಭಾಗದಲ್ಲಿ ದೊರೆತಿವೆ. ಶ್ರೀನಿವಾಸ ರಿತ್ತಿ, ಮಜುಂದಾರ್, ಶೆಟ್ಟರ್ ಅವರಂತಹ ಉತ್ಖನನ ತಜ್ಞರು ತಮ್ಮ ಅಪಾರ ಶ್ರಮದಿಂದ ಈ ಭಾಗದ ಇತಿಹಾಸದ ಮೇಲೆ ಬೆಳಕು ಚೆಲ್ಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಈಶ್ವರ ಹತ್ತಿ, ಲಿಂ.ಬಿ.ಸಿ.ಪಾಟೀಲ ದಣಿವರಿಯದ ಚೇತನ. ತಮ್ಮ 94ನೇ ಇಳಿವಯಸ್ಸಿನಲ್ಲಿಯೂ ಸಂಶೋಧನೆ ಮಾಡಬೇಕು ಎಂಬ ಹಂಬಲ ಹೊಂದಿದ್ದರು. ಶಿಕ್ಷಕ ವೃತ್ತಿಯಿಂದ ನಿವೃತ್ತಿಗೊಂಡು ದುರ್ಗಮವಾದ ಸಂಶೋಧನಾ ವೃತ್ತಿಯನ್ನು ಕೈಗೊಂಡು ಸುಮಾರು 10 ಪುಸ್ತಕಗಳನ್ನು ಪ್ರಕಟಿಸಿದರು. ಅವರ ಅವಿರತ ಶ್ರಮ, ಧೀಮಂತಿಕೆಯಿಂದ ಜಿಲ್ಲೆಯ ಇತಿಹಾಸ ಪ್ರಜ್ಞೆ ಉಳಿದುಕೊಂಡು ಬಂದಿದೆ ಎಂದು ಹೇಳಿದರು.

ನಂತರ ಡಿವೈಎಸ್ಪಿ ಡಾ.ಬಿ.ಪಿ.ಚಂದ್ರಶೇಖರ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಮೊಬೈಲ್ ದಾಸರಾಗುತ್ತಿದ್ದಾರೆ. ಅತಿ ಹೆಚ್ಚು ಕಲಿತು ಜಾತಿವಾದಿಗಳಾಗುತ್ತಿದ್ದಾರೆ. ಗಾಂಧಿಯವರ ಮೂರು ಮಂಗಗಳ ಜೊತೆ ಮೊಬೈಲ್ ಹಿಡಿದ ನಾಲ್ಕನೇ ಮಂಗಗಳು ಆಗಿದ್ದಾರೆ ಎಂದು ಕಾರ್ಯಕ್ರಮದ ಉದ್ದಕ್ಕೂ ಹಾಸ್ಯ ಮಿಶ್ರಿತ ಶೈಲಿಯಲ್ಲಿ ಭಾಷಣ ಮಾಡಿದ ಗಮನ ಸೆಳೆದರು.

ದತ್ತಿ ದಾನಿ, ಪುರಾತತ್ವ ಇಲಾಖೆಯ ನಿವೃತ್ತ ಅಧಿಕಾರಿ ಸಿ.ಬಿ.ಪಾಟೀಲ ಮಾತನಾಡಿದರು. ಸಿದ್ದನಗೌಡ ಪಾಟೀಲ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಬಂಡಾಯ ಸಾಹಿತಿ ರಮೇಶ ಗಬ್ಬೂರ ಅವರ 'ಕಾಮ್ರೇಡ್ ಬಸವಣ್ಣ' ಕೃತಿಗೆ ಲಿಂ.ಮರಿಗೌಡ ಮಲ್ಲನಗೌಡರ ದತ್ತಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ರಾಜಶೇಖರ ಅಂಗಡಿ ವಹಿಸಿದ್ದರು.  ಕಾಲೇಜಿನ ಗ್ರಂಥಪಾಲಕ ಪ್ರಕಾಶ ಎಸ್.ಯು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಚನ್ನಬಸಪ್ಪ ಕಡ್ಡಿಪುಡಿ ಸ್ವಾಗತಿಸಿದರು. ಪ್ರೊ.ಶಂಕ್ರಯ್ಯ ಅಬ್ಬಿಗೇರಿಮಠ ದತ್ತಿ ನುಡಿ ಪರಿಚಯಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಸವರಾಜ ಪಿನ್ನಿ, ನಿವೃತ್ತ ಪ್ರಾಚಾರ್ಯ ಮಹಾಂತೇಶ ಮಲ್ಲನಗೌಡರ, ಪ್ರಾಚಾರ್ಯ ವಿಠೋಬಾ.ಎಸ್. ಇದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಹಿತಿ ಎಸ್.ಬಿ.ಗೊಂಡಬಾಳ, ಬಸವರಾಜ ಮೂಲಿಮನಿ, ಡಾ.ಗೀತಾ ಪಾಟೀಲ, ಶರಣಬಸವರಾಜ ಗದಗ, ಶ್ರೀನಿವಾಸ ದಾಸರ ಅವರನ್ನು ಸನ್ಮಾನಿಸಲಾಯಿತು. ಮುಖ್ಯಾಂಶ ಜಿಲ್ಲೆಯ ಪುರಾತತ್ವ ಇತಿಹಾಸ ಹಾಗೂ ಶಾಸನ ಸಾಹಿತ್ಯ ಉಪನ್ಯಾಸ ಐತಿಹಾಸಿಕ ಸ್ಮಾರಕ, ಶಾಸನ ರಕ್ಷಣೆಗೆ ಮನವಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಲಾಯಿತು.