ಒಳ ಮೀಸಲಾತಿ ಜಾರಿಗೆ ಅಗ್ರಹಿಸಿ ಮಾ.12 ಕೊಪ್ಪಳದಲ್ಲಿ ಎಸ್ಸಿ ಮಾದಿಗ ಮತ್ತು ಎಸ್ಟಿ ವಕೀಲರಿಂದ ಪ್ರತಿಭಟನೆ

ಒಳ ಮೀಸಲಾತಿ ಜಾರಿಗೆ ಅಗ್ರಹಿಸಿ ಮಾ.12 ಕೊಪ್ಪಳದಲ್ಲಿ ಎಸ್ಸಿ ಮಾದಿಗ ಮತ್ತು ಎಸ್ಟಿ ವಕೀಲರಿಂದ ಪ್ರತಿಭಟನೆ SC Madiga and ST lawyers protest in Koppal on March 12 demanding implementation of internal reserva

ಕೊಪ್ಪಳ 10:   ಸಾಮಾಜಿಕ ಶೋಷಿತ ಜನಾಂಗವಾಗಿರುವ ಮಾದಿಗ ಸಮಾಜಕ್ಕೆ ಮತ್ತು ಪರಿಶಿಷ್ಟ ಪಂಗಡದ ಸಮಾಜಕ್ಕೆ ಸರಕಾರ ಉದ್ಯೋಗದಲ್ಲಿ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಅಗ್ರಹಿಸಿ ಮಾ.12 ರಂದು ನಗರದಲ್ಲಿ ಎಸ್ಸಿ ಮಾದಿಗ ಸಮುದಾಯದ ಮತ್ತು ಪರಿಶಿಷ್ಟ ಪಂಗಡದ  ವಕೀಲರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗ ಸಮಾಜದ ಮ್ತು ಎಸ್ಟಿ ಸಮುದಾಯದ ವಕೀಲರು ತಿಳಿಸಿದರು.  ಮಂಗಳವಾರ ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಸಮುದಾಯದ ವಕೀಲರಾದ ರವಿಕುಮಾರ ಬನ್ನಿಕೊಪ್ಪ, ಡಿ.ಎಂ.ಪೂಜಾರ, ವಿರುಪಾಕ್ಷಪ್ಪ ಕಟ್ಟಿಮನಿ, ಎಸ್‌.ಹೆಚ್‌.ಸುರಪೂರ, ವಕೀಲರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ ಮತ್ತು ಎಸ್‌.ಹೆಚ್‌.ಗುನ್ನಳ್ಳಿ ಮಾತನಾಡಿದರು. 

ಈ ಹಿಂದೆ ರಾಜ್ಯ ಸರಕಾರ ಎಸ್ಸಿ ಸಮುದಾಯಕ್ಕೆ ಶೇ.17 ಮತ್ತು ಎಸ್ಟಿ ಸಮುದಾಯಕ್ಕೆ ಒಳ ಮಿಸಲಾತಿ ಮಾಡುವುದಾಗಿ ಭರವಸೆ ನೀಡಿತ್ತು.  ಈ ಕುರಿತು ಕೆಲವರು ನ್ಯಾಯಾಲಯ ಮೊರೆ ಹೋಗಿದ್ದರಿಂದ ಈ ಒಳ ಮಿಸಲಾತಿ ಅನುಷ್ಟಾನ ವಿಳಂಬವಾಯಿತು.   ಆದರೆ ಇತ್ತಿಚೀಗೆ ಧಾರವಾಡದಲ್ಲಿ ನಡೆದ ಯುವಕರ ಉದ್ಯೋಗದ ಹೋರಾಟದಿಂದ ರಾಜ್ಯ ಸರಕಾರ ತಕ್ಷಣ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಮಾಡಲು ಮುಂದಾಗಿದೆ. ಈ ನೇಮಕಾತಿಯಲ್ಲಿ ಈ ಹಿಂದಿನಂತೆ ಎಸ್ಸಿ ಸಮುದಾಯಕ್ಕೆ ಶೇ.15 ಮತ್ತು ಎಸ್ಟಿ ಸಮುದಾಯಕ್ಕೆ ಶೇ.3 ಮೀಸಲಾತಿ ಅನುಸರಿಸುವುದಾಗಿ ತಿಳಿಸಿದೆ.  ಇದರಿಂದ ನಮ್ಮ ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತದೆ.  

ಈ ಹಿನ್ನೆಲೆಯಲ್ಲಿ ನಾವು ಒಳ ಮೀಸಲಾತಿ ಪ್ರಕಾರ ನೇಮಕಾತಿ ಭರ್ತಿ ಮಾಡಿಕೊಡಬೇಕು ಎಂದು ಅಗ್ರಹಿಸುತ್ತಿದ್ದೇವೆ.  ಶೇ.17ರ ಬದಲು ಶೇ.15 ಮೀಸಲಾತಿ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವುದಾದರೆ ಮಾದಿಗ ಸಮುದಾಯಕ್ಕೆ  ಪ್ರತ್ಯೇಕವಾಗಿ ಶೇ.6 ಮೀಸಲಾತಿ ನಿಗದಿಪಡಿಸಬೇಕು.  ಎಸ್ಟಿ ಸಮುದಾಯಕ್ಕೆ ಶೇ.4 ಮೀಸಲಾತಿ ನಿಗದಿಪಡಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ.  ಒಳ ಮೀಸಲಾತಿ ಜಾರಿ ಮಾಡಬೇಕೆಂದು ಅಗ್ರಹಿಸಿ ರಾಜ್ಯಾದ್ಯಂತ ಮತ್ತೆ ಹೋರಾಟಗಳು ಪ್ರಾರಂಭವಾಗಿವೆ.

ಈ ಹಿನ್ನೆಲೆಯಲ್ಲಿ ಮಾದಿಗ ಸಮುದಾಯ ಮಾ.12 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.  ಆದರೆ ನಮ್ಮ ಮಾದಿಗ ಮತ್ತು ಎಸ್ಟಿ ಸಮುದಾಯದ ಕೊಪ್ಪಳ ಜಿಲ್ಲೆಯ ಎಲ್ಲಾ ವಕೀಲರು ಮಾ.12 ರಂದು ಒಳ ಮೀಸಲಾತಿ ಜಾರಿ ಮಾಡಬೇಕೆಂದು ಒತ್ತಾಯಿಸಿ ನಗರದ ಗಂಜ್ ವೃತ್ತದಿಂದ ಜಿಲ್ಲಾಡಳಿತ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ.  ಈ ಪ್ರತಿಭಟನೆಯಲ್ಲಿ ಜಿಲ್ಲೆಯ ಎಸ್ಸಿ ಮಾದಿಗ ಸಮುದಾಯದ ಮತ್ತು ಪರಿಶಿಷ್ಟ ಪಂಗಡದ ಎಲ್ಲಾ ವಕೀಲರು ಪಾಲ್ಗೊಳ್ಳಬೇಕು. ನಮ್ಮ ಸಮುದಾಯದ ಪಿಳಿಗೆಯ ಮುಂದಿನ ಭವಿಷ್ಯಕ್ಕಾಗಿ ಈ ಹೋರಾಟ ನಡೆಸಲಾಗುತ್ತಿದೆ. 

ರಾಜ್ಯ ಸರಕಾರ ಒಳ ಮೀಸಲಾತಿ ಜಾರಿ ಮಾಡುವಲ್ಲಿ ಮೀನ ಮೇಷ ಮಾಡಿ ಉದ್ಯೋಗದ ನೇಮಕಾತಿಯಲ್ಲಿ ನಮ್ಮ ಸಮುದಾಯಕ್ಕೆ ಮತ್ತೆ ಅನ್ಯಾಯ ಮಾಡಲು ಮುಂದಾಗಿದೆ.  ಇದನ್ನು ನಾವೆಲ್ಲರು ಒಕ್ಕೂರಲಿನಿಂದ ಖಂಡಿಸುವುದರ ಜೊತೆಗೆ ಸರಕಾರಕ್ಕೆ ಎಚ್ಚರಿಕೆ ನೀಡಬೇಕಾಗಿದೆ.  ಸರಕಾರ ನಮ್ಮ ಬೇಡಿಕೆಯನ್ನು ಪರಿಗಣಿಸದೇ ಹಳೆಯ ಮೀಸಲಾತಿಯಲ್ಲಿ ನೇಮಕ ಪ್ರಕ್ರೀಯೆ ಮಾಡಿದರೆ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ವಕೀಲರು ಎಚ್ಚರಿಕೆ ನೀಡಿದರು.