“ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ನಮ್ಮೆಲ್ಲರ ಹೊಣೆ” ಶಶಿಧರ್

“Conservation of natural resources, all our responsibility” Shashidhar

 “ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ನಮ್ಮೆಲ್ಲರ ಹೊಣೆ” ಶಶಿಧರ್ 

ಬಳ್ಳಾರಿ   15:  “ನವೀಕರಿಸಲಾಗದ ನೈಸರ್ಗಿಕ ಶಕ್ತಿ ಮೂಲಗಳ ಅಪಬಳಕೆಯನ್ನು ತಪ್ಪಿಸಿ, ಭವಿಷ್ಯಕ್ಕಾಗಿ ಸಂಪನ್ಮೂಲಗಳನ್ನು ಉಳಿಸಬೇಕು; ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಎಲ್ಲರ ಹೊಣೆ” ಎಂದು ಮುನಿರಾಬಾದ್ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್‌ ಅಧ್ಯಕ್ಷ ಡಾ.ಎಸ್‌.ಎಂ. ಶಶಿಧರ್ ಹೇಳಿದರು. ಅವರು ಮುನಿರಾಬಾದಿನ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್‌ ಕೇಂದ್ರ ಹಾಗೂ ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ್ಘ ಮ್ಯಾನೇಜ್ಮೆಂಟ್  ಕಾಲೇಜು ಸಂಯುಕ್ತವಾಗಿ ಶನಿವಾರದಂದು ಕಾಲೇಜಿನಲ್ಲಿ ಆಯೋಜಿಸಿದ್ದ ’ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನಾಚರಣೆ’ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.   

‘ನಾವು ಈಗ ಬಳಸುವ ಪ್ರಾಥಮಿಕ ಶಕ್ತಿಯ ಮೂಲವು ಪಳೆಯುಳಿಕೆ ಇಂಧನಗಳು; ಕಲ್ಲಿದ್ದಲು, ನೈಸರ್ಗಿಕ ಅನಿಲ ಇತ್ಯಾದಿಗಳಿಂದ ಬರುತ್ತದೆ, ಅದು ರೂಪುಗೊಳ್ಳಲು ಲಕ್ಷಾಂತರ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಅವುಗಳನ್ನು ನವೀಕರಿಸಲಾಗುವುದಿಲ್ಲ. ಆದ್ದರಿಂದ, ನಾವು ಸೌರಶಕ್ತಿ, ಪವನ ಶಕ್ತಿ, ಜಲಶಕ್ತಿ, ಭೂಶಾಖದ ಶಕ್ತಿ, ಜೀವರಾಶಿ ಶಕ್ತಿ ಮುಂತಾದ ನವೀಕರಿಸಬಹುದಾದ ಸಂಪನ್ಮೂಲಗಳಿಂದ ಶಕ್ತಿಯನ್ನು ಉತ್ಪಾದಿಸುವುದು ಅನಿವಾರ್ಯವಾಗಿದೆ’ ಎಂದು ಡಾ.ಎಸ್‌.ಎಂ. ಶಶಿಧರ್ ಹೇಳಿದರು. ನಮ್ಮ ದೈನಂದಿನ ಜೀವನದಲ್ಲಿ ಸಣ್ಣ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ, ವಿಶ್ವದಲ್ಲಿ ನಾವು ದೊಡ್ಡ ಪರಿವರ್ತನೆಯನ್ನು. ಅನುಷ್ಠಾನಕ್ಕೆ ತರಬಹುದು. ಲೈಟ್ಗಳು, ಫ್ಯಾನ್ಗಳು, ಏರ್ ಕಂಡಿಷನರ್ಗಳು ಮತ್ತು ಇತರ ಎಲೆಕ್ಟ್ರಾನಿಕ್ ಉಪಕರಣಗಳ ಅನಗತ್ಯ ಬಳಕೆಯನ್ನು ತಪ್ಪಿಸುವ ಮೂಲಕ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಕೆಲಸವನ್ನು ಮಾಡಬಹುದು. ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನದ ಆಚರಣೆಯ ಹಿಂದಿನ ಮುಖ್ಯ ಉದ್ದೇಶವೆಂದರೆ ಜನರು ಶಕ್ತಿಯ ಸಮರ್ಥ ಬಳಕೆ ಮತ್ತು ಅದರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲು ಮತ್ತು ತಮ್ಮ ಜೀವನಶೈಲಿಯ ಬಗ್ಗೆ ಹೆಚ್ಚು ಜಾಗೃತರಾಗುವಂತೆ ಮಾಡುವುದು ಎಂದು ಡಾ.ಎಸ್‌.ಎಂ. ಶಶಿಧರ್ ಹೇಳಿದರು.  

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಪ-ಪ್ರಾಂಶುಪಾಲ ಡಾ.ಬಿ.ಎಸ್‌. ಖೆಣೇದ್ ಮಾತನಾಡಿ ಭಾರತವು ಶಕ್ತಿ ಸಂರಕ್ಷಣಾ ಕಾಯ್ದೆಯನ್ನು ಮೊದಲ ಬಾರಿಗೆ 2001ರಲ್ಲಿ ಶಕ್ತಿ ದಕ್ಷತೆ ಬ್ಯೂರೋವನ್ನು ಜಾರಿಗೆ ತಂದಿತು. ಶಕ್ತಿಯ ಬಳಕೆಯನ್ನು ಪರಿಣಾಮಕಾರಿಯಾಗಿ ಬಳಸುವಂತೆ ಜನರನ್ನು ಪ್ರೋತ್ಸಾಹಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು. ಮುನಿರಾಬಾದಿನ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್‌ ಗೌರವ ಕಾರ್ಯದರ್ಶಿ ಡಾ.ಪಿ.ಶರತ್ ಕುಮಾರ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ವಿ.ವೆಂಕಟ ರಮಣ, ವಿದ್ಯುತ್ ವಿಭಾಗದ ಮುಖ್ಯಸ್ಥ ಡಾ ಶರಣ ರೆಡ್ಡಿ, ಸಿವಿಲ್ ವಿಭಾಗದ ಮುಖ್ಯಸ್ಥ ಡಾ ಮಣಿಕಂಠ ಹಾಗೂ ಸಂಯೋಜಕರಾದ ಡಾ.ಶೇಖರ್ ಕೆ., ಡಾ.ಬಣಕಾರ ನಾಗರಾಜ್, ಶ್ರೀ ಈರಯ್ಯ ಶಿಕ್ಕೇರಿಮಠ ಮತ್ತು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಮಾರಂಭದಲ್ಲಿ ಶಕ್ತಿ ಮೂಲಗಳನ್ನು ದಕ್ಷತೆಯಿಂದ ಬಳಸುವುದಾಗಿ ಪ್ರತಿಜ್ಞೆ ಮಾಡಲಾಯಿತು. ಹಾಗೂ ವಿದ್ಯಾರ್ಥಿಗಳು ಸ್ಥಾಪಿಸಿರುವ ’ನವೀಕರಿಸಬಹುದಾದ ಶಕ್ತಿಮೂಲಗಳ ಕ್ಲಬ್‌’ ಉದ್ಘಾಟಿಸಲಾಯಿತು.