‘ಕೊನೆಯ ಪುಟ’ ಕಿರುಚಿತ್ರ ಪ್ರದರ್ಶನ: ವೃದ್ಧಾಶ್ರಮ ಜಾಗೃತಿ

‘ಕೊನೆಯ ಪುಟ’ ಕಿರುಚಿತ್ರ ಪ್ರದರ್ಶನ: ವೃದ್ಧಾಶ್ರಮ ಜಾಗೃತಿ  ‘The Last Page’ short film screening: Old age home awareness

ಬೆಳಗಾವಿ 20: ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿಯ ವತಿಯಿಂದ ನಿರ್ಮಿಸಲಾದ ‘ಕೊನೆಯ ಪುಟ’ ಎಂಬ ವೃದ್ಧಾಶ್ರಮ ಕುರಿತ ಜಾಗೃತಿ ಕಿರುಚಿತ್ರವನ್ನು ಬೆಳಗಾವಿ ಹಿಂದವಾಡಿಯಲ್ಲಿ ರಾಣಿ ಪಾರ್ವತಿ ದೇವಿ (ಆರಿ​‍್ಪ.ಡಿ) ಕಾಲೇಜ್ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರದರ್ಶಿಸಲಾಯಿತು.  

ಉಪನ್ಯಾಸಕ ಮಂಜುನಾಥ ದೊಡ್ಡಮನಿ, ಪ್ರಾಂಶುಪಾಲ ತೃಪ್ತಿ ಶಿಂಧೆ ಸೇರಿದಂತೆ ವಿದ್ಯಾರ್ಥಿಗಳು ಕಿರುಚಿತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಸಮಾಜದಲ್ಲಿ ಪೋಷಕರಿಗೆ ಸಲ್ಲಬೇಕಾದ ಗೌರವ ಮತ್ತು ಮೌಲ್ಯಗಳ ಬಗ್ಗೆ ಆಳವಾದ ಸಂದೇಶ ನೀಡಿದ ಕಿರುಚಿತ್ರಕ್ಕೆ ಅಭಿನಂದನೆ ಸಲ್ಲಿಸಿದರು.  

ಕಿರುಚಿತ್ರ ಪ್ರದರ್ಶನಕ್ಕೂ ಮುನ್ನ ಮಹಿಳಾ ಕಲ್ಯಾಣ ಸಂಸ್ಥೆಯ ಸಂಸ್ಥಾಪಕ ಎಂ.ಎಸ್‌. ಚೌಗುಲಾ ಅವರು ಮಾತನಾಡಿ ಸಮಾಜದಲ್ಲಿ ವೃದ್ಧಾಶ್ರಮಗಳ ಹೆಚ್ಚಳವು ಕುಟುಂಬ ವ್ಯವಸ್ಥೆಯಲ್ಲಿ ಉಂಟಾಗುತ್ತಿರುವ ಬಿರುಕುಗಳನ್ನು ಪ್ರತಿಬಿಂಬಿಸುತ್ತಿದೆ. ಇಂತಹ ಕಿರುಚಿತ್ರಗಳ ಮೂಲಕ ಯುವ ಪೀಳಿಗೆಗೆ ತಂದೆ-ತಾಯಿಯರ ಮಹತ್ವ ಹಾಗೂ ಕುಟುಂಬದ ಬಾಂಧವ್ಯದ ಪ್ರಾಮುಖ್ಯತೆಯನ್ನು ತಲುಪಿಸುವುದು ಮುಖ್ಯ ಎಂದು ತಿಳಿಸಿದರು.  

ವಿದ್ಯಾರ್ಥಿಗಳಿಗೆ ಥಿಯೇಟರಿಕಲ್ ಅನುಭವ ನೀಡುವ ಉದ್ದೇಶದಿಂದ ಈ ಕಿರುಚಿತ್ರವನ್ನು ಲೋಕಮಾನ್ಯ ಮಲ್ಟಿಪರ​‍್ಪಸ ಕೋ-ಆಪ್ ಸೊಸೈಟಿಯವರ ಲೋಕಮಾನ್ಯ ಚಿಲ್ಡ್ರನ್ಸ್‌ ಲೈಬ್ರರಿಯಲ್ಲಿ ಪ್ರದರ್ಶಿಸಲಾಯಿತು.  

ಲೈಬ್ರರಿಯ ಸಂಚಾಲಕಿ ಶೋಭಾ ನಾಯಕ್, ಅಸಿಸ್ಟೆಂಟ್ ಮ್ಯಾನೇಜರ್ ನಾಗೇಶ್ ಜನ್ನು, ಕೋ-ಆರ್ಡಿನೇಟರ್ ಡಾ. ಸುನಿತಾ ರಕ್ಷೆ, ಮಹಿಳಾ ಕಲ್ಯಾಣ ಸಂಸ್ಥೆಯ ಸಂಸ್ಥಾಪಕ ಎಂ.ಎಸ್‌. ಚೌಗುಲಾ, ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ಆರ್‌.ಜೆ. ಚೇತನ ಕುಲಕರ್ಣಿ, ಬಸವರಾಜ ಗುಗ್ಗರಿ ಹಾಗೂ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  

ಕಾರ್ಯಕ್ರಮದ ಅಂತ್ಯದಲ್ಲಿ ಕಿರುಚಿತ್ರದ ಸಂದೇಶವು ವಿದ್ಯಾರ್ಥಿಗಳಲ್ಲಿ ಆಳವಾದ ಪ್ರಭಾವ ಬೀರಿದ್ದು, ಇಂತಹ ಸಾಮಾಜಿಕ ಪ್ರಬೋಧನಾತ್ಮಕ ಚಿತ್ರಗಳು ಹೆಚ್ಚು ಪ್ರದರ್ಶನಗೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.