ವಿಠ್ಠಲ ರುಕಮಾಯಿ ಮೂರ್ತಿ ಪ್ರತಿಷ್ಠಾಪನೆ ಸಂಭ್ರಮ

ವಿಠ್ಠಲ ರುಕಮಾಯಿ ಮೂರ್ತಿ ಪ್ರತಿಷ್ಠಾಪನೆ ಸಂಭ್ರಮ  Celebrations marking the installation of the Vitthal-Rukmai idols

ನೇಸರಗಿ ಜುಲೈ 5: ಇಲ್ಲಿನ ಪ್ರಸಿದ್ಧ ಚನ್ನವೃಷಭೇಂದ್ರ ದೇವರಕೊಂಡ ಅಜ್ಜನವರ ಲೀಲಾಮಠದಲ್ಲಿ ನೂತನವಾಗಿ ನಿರ್ಮಿಸಲಾದ ಕಟ್ಟಡದಲ್ಲಿ ವಿಠ್ಠಲ ರುಕಮಾಯಿ ಮೂರ್ತಿಗಳ ಪ್ರತಿಷ್ಠಾಪನೆ ಮಹೋತ್ಸವ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.  ಜುಲೈ 4ರಂದು ಹೊಸಟ್ಟಿ ಬಸವೇಶ್ವರ ದೇವಸ್ಥಾನದಿಂದ ವಿಠ್ಠಲ ರುಕಮಾಯಿ ಮೂರ್ತಿಗಳನ್ನು ವೇದಘೋಷ, ಕುಂಭ, ಆರತಿ ಹಾಗೂ ವಾರಕರಿ ಮಂಡಳಿಯ ತಾಳ, ಮೃದಂಗ ಮತ್ತು ಭಜನೆಗಳೊಂದಿಗೆ ಭವ್ಯ ಮೆರವಣಿಗೆಯಲ್ಲಿ ಲೀಲಾಮಠಕ್ಕೆ ತರಲಾಯಿತು. ಬಳಿಕ ಪೂಜೆ, ಪುಣ್ಯಾಹವಾಚನ, ಸ್ಥಳಶುದ್ಧಿ, ವಾಸ್ತುಶಾಂತಿ, ಹೋಮ, ಅಧಿವಾಸ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.  

ಭಾನುವಾರ ಬೆಳಿಗ್ಗೆ ಶುಭ ಮುಹೂರ್ತದಲ್ಲಿ ಅಭಿಷೇಕ, ಕಾಕಡ ಆರತಿ, ಕಲಾವೃದ್ಧಿ ಹೋಮ ಹಾಗೂ ಇತರ ವೈದಿಕ ವಿಧಿವಿಧಾನಗಳ ನಂತರ ಪಂಡರಪುರದ ಕೌಸ್ತುಭ ರಾಹು ವಿವೇಕಾನಂದ ದಾದಾ ವಾಸ್ಕರ್ ಮಹಾರಾಜರ ಅಮೃತ ಹಸ್ತದಿಂದ ವಿಠ್ಠಲ ರುಕಮಾಯಿ ಮೂರ್ತಿಗಳ ಪ್ರಾಣಪ್ರತಿಷ್ಠೆ ನೆರವೇರಿತು. ಕಾರ್ಯಕ್ರಮದಲ್ಲಿ ಜ್ಞಾನೇಶ್ವರಿ ಪಾರಾಯಣ, ಪ್ರವಚನ ಹಾಗೂ ಮಹಾಪ್ರಸಾದ ವಿತರಣೆ ನಡೆಯಿತು.  ಮಹೋತ್ಸವದಲ್ಲಿ ವಿವಿಧ ಮಠಗಳ ಶ್ರೀಗಳು, ಸಾಧು- ಸಂತರು ವಾರಕರಿ ಮಂಡಳಿಯ ಸದಸ್ಯರು, ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿ ದರ್ಶನ ಪಡೆದು ಆಶೀರ್ವಾದ ಪಡೆದರು.