ಹುಬ್ಬಳ್ಳಿಯನ್ನೇ ಗೆದ್ದ ವ್ಯಕ್ತಿತ್ವ ಪ್ರೊ. ಗುರುರಾಜ ಕಲಕೋಟಿ: ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿಯನ್ನೇ ಗೆದ್ದ ವ್ಯಕ್ತಿತ್ವ ಪ್ರೊ. ಗುರುರಾಜ ಕಲಕೋಟಿ: ಬಸವರಾಜ ಬೊಮ್ಮಾಯಿ  Personality Prof. who won Hubli. Gururaja Kalakoti: Basavaraja Bommai

ಲೋಕದರ್ಶನ ವರದಿ 

ಹುಬ್ಬಳ್ಳಿ, ಜು. 5: "ಪ್ರೊ. ಗುರುರಾಜ ಬಿ. ಕಲಕೋಟಿ ಅವರು ಹುಬ್ಬಳ್ಳಿಯನ್ನೇ ಗೆದ್ದ ವ್ಯಕ್ತಿತ್ವ. ನಿವೃತ್ತಿಯ ನಂತರವೂ ವಿಶ್ರಾಂತಿ ಪಡೆಯದೆ ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು. ಅಪಾರ ಜ್ಞಾನ ಹೊಂದಿದ್ದರೂ ಅದರ ಬಗ್ಗೆ ಎಂದಿಗೂ ಅಹಂಕಾರ ಪ್ರದರ್ಶಿಸಲಿಲ್ಲ. ಅತ್ಯಂತ ಸರಳ, ಸಜ್ಜನ ಮತ್ತು ಮೌಲ್ಯಾಧಾರಿತ ಬದುಕು ನಡೆಸಿದ ಅಪರೂಪದ ವ್ಯಕ್ತಿ ಅವರು" ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ನುಡಿದರು. ನಗರದ ಲಿಂಗರಾಜನಗರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕೆಎಲ್‌ಇ ಸಂಸ್ಥೆಯ ಪಿ.ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಹಾಗೂ ಎನ್‌ಸಿಸಿ ಮೇಜರ್ ಆಗಿದ್ದ ದಿವಂಗತ ಪ್ರೊ. ಗುರುರಾಜ ಬಿ. ಕಲಕೋಟಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲಕೋಟಿ ಅವರ ವ್ಯಕ್ತಿತ್ವ ಮತ್ತು ಸೇವೆಯನ್ನು ಸ್ಮರಿಸಿದರು.  

"ಕಲಕೋಟಿ ಅವರು ಎಲ್ಲರ ಆತ್ಮೀಯರಾಗಿದ್ದರು. ಹಿರಿಯರಿಗೆ ಗೌರವ, ಕಿರಿಯರಿಗೆ ಪ್ರೋತ್ಸಾಹ ನೀಡುತ್ತಾ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದರು. ಅವರ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತಹ ವಿಶಿಷ್ಟ ವ್ಯಕ್ತಿತ್ವ ಅವರದು. ಅವರೊಂದಿಗಿನ ಒಡನಾಟ ಹಾಗೂ ಅನುಭವಗಳನ್ನು ಹಂಚಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ" ಎಂದು ಹೇಳಿದರು. ಇಂಜಿನಿಯರಿಂಗ್ ಕಾಲೇಜು ದಿನಗಳಿಂದ ಹಿಡಿದು ಮುಖ್ಯಮಂತ್ರಿ ಹುದ್ದೆಯವರೆಗೆ ತಮ್ಮ ಮತ್ತು ಕಲಕೋಟಿ ಅವರ ನಡುವಿನ ಸಂಬಂಧ ನಿರಂತರವಾಗಿತ್ತು ಎಂದು ಸ್ಮರಿಸಿದ ಬೊಮ್ಮಾಯಿ, "ಅವರಿಗೆ ಯಾವುದೇ ಹುದ್ದೆಯ ಮಹತ್ವಾಕಾಂಕ್ಷೆ ಇರಲಿಲ್ಲ. ವಿಭಾಗದ ಮುಖ್ಯಸ್ಥ, ಪ್ರಾಂಶುಪಾಲರಂತಹ ಹುದ್ದೆಗಳನ್ನು ಸುಲಭವಾಗಿ ಅಲಂಕರಿಸುವ ಅವಕಾಶಗಳಿದ್ದರೂ ಸರಳ ಜೀವನವನ್ನೇ ಆಯ್ಕೆ ಮಾಡಿಕೊಂಡರು.