ದೇಶಪಾಂಡೆ ಸಭಾಭವನದಲ್ಲಿ ಕ್ಷೇತ್ರ ಧರ್ಮಸ್ಥಳ - ಪ್ರದಾನ’ ಸಮಾರಂಭ
ಧಾರವಾಡ 19: ಕರ್ನಾಟಕ ವಿದ್ಯಾವರ್ಧಕ ಸಂಘವು, ಕ್ಷೇತ್ರ ಧರ್ಮಸ್ಥಳ ರತ್ನಮ್ಮ ಹೆಗ್ಗಡೆ ದತ್ತಿ ಅಂಗವಾಗಿ ದಿನಾಂಕ 20 ರಂದು ಸಂಜೆ 6 ಗಂಟೆಗೆ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಕ್ಷೇತ್ರ ಧರ್ಮಸ್ಥಳ ರತ್ನಮ್ಮ ಹೆಗ್ಗಡೆ -2023 ಪ್ರದಾನ’ ಸಮಾರಂಭ ಆಯೋಜಿಸಿದೆ. ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಬಹುಮಾನ ಪ್ರದಾನ ಮಾಡುವರು. ಧಾರವಾಡ ಸತ್ತೂರ ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪಕುಲಪತಿ ಡಾ. ನಿರಂಜನಕುಮಾರ ಹಾಗೂ ಧಾರವಾಡ ಎಎಲ್‌ಸಿಯ ಕಾರ್ಯನಿರ್ವಾಹಕ ನಿರ್ದೇಶಕಿ ಮತ್ತು ಎಸ್‌ಡಿಎಂ ವಿಶ್ವವಿದ್ಯಾಲಯದ ಬಿಒಜಿ ಸದಸ್ಯೆ ಪದ್ಮಲತಾ ನಿರಂಜನಕುಮಾರ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಧಾರವಾಡ ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಗುರ್ಪ ಬೆಲ್ಲದ ಅಧ್ಯಕ್ಷತೆ ವಹಿಸುವರು. ಧಾರವಾಡ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜೀವಂಧರಕುಮಾರ ಉಪಸ್ಥಿತರಿರುವರು. ಡಾ. ನಿಂಗು ಸೊಲಗಿ-ಕವನ ಸಂಕಲನಗಳ ಕುರಿತು, ಡಾ. ಗೋವಿಂದರಾಜ್ ತಳಕೋಡ-ಕಥೆ ಕಾದಂಬರಿ ಕುರಿತು ಮತ್ತು ಡಾ. ವೀರ್ಪ ಪೂಜಾರ-ಇತರೆ ಲೇಖನಗಳ ಕುರಿತು ನಿರ್ಣಾಯಕರ ಪರ ನುಡಿಗಳನ್ನಾಡುವರು.
ಸಾಹಿತಿಗಳು, ಚಿಂತಕರು, ಕಲಾವಿದರು, ತಾಯಂದಿರು, ವಿದ್ಯಾರ್ಥಿಗಳು, ಸಂಘದ ಸದಸ್ಯರು, ಆಸಕ್ತ ಸಾರ್ವಜನಿಕರು ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ 146 ದತ್ತಿಗಳಿದ್ದು, ಇವುಗಳಲ್ಲಿ ಒಂದಾಗಿರುವ ಮತ್ತು ಅತ್ಯಂತ ಶ್ರೇಷ್ಠ ದತ್ತಿ ಆಗಿರುವದು ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ. 1977 ರಲ್ಲಿ ಪ್ರಾರಂಭಗೊಂಡ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ ಯೋಜನೆ ಇದುವರೆಗೆ 135 ಮಹಿಳಾ ಕೃತಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿದೆ. ಪ್ರಾರಂಭದಲ್ಲಿ ಕೇವಲ ಒಂದು ಸಾವಿರ ರೂ. ಪ್ರೋತ್ಸಾಹ ಧನದೊಂದಿಗೆ ಆರಂಭಗೊಂಡ ಈ ಯೋಜನೆ ಈಗ 60 ಸಾವಿರ ರೂಗಳಿಗೆ ಏರಿದೆ. ಆಯಾ ವರ್ಷದ ಮಹಿಳಾ ಸಾಹಿತ್ಯದ ಉತ್ತಮ ಕೃತಿಗಳಿಗೆ ನಗದು ರೂಪದಲ್ಲಿ ಬಹುಮಾನ ನೀಡುವ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಬಹುಮಾನ ಬಂದ ಕೃತಿಗಳಿಗೆ ವಿಶೇಷ ಗೌರವ ಮತ್ತು ಮನ್ನಣೆ. ಯಾವುದೇ ನಾಡಿನ ಸಾಂಸ್ಕೃತಿಕ ಸಮೃದ್ಧತೆಯಲ್ಲಿ ಮಹಿಳೆಯರ ಪಾಲು ಗಮನಾರ್ಹವಾಗಿರುತ್ತದೆ.
ವೈಚಾರಿಕ ಸಾಹಿತ್ಯದ ದೃಷ್ಟಿಯಿಂದಲೂ ಈಗ ಮಹಿಳೆಯರ ಕೊಡುಗೆಯನ್ನು ಕಡೆಗಣಿಸುವಂತಿಲ್ಲ. ಕಾವ್ಯ, ಕಥೆ, ಕಾದಂಬರಿ, ವೈಚಾರಿಕತೆಗಳ ವಿಷಯದಲ್ಲಿ ಮಹಿಳೆಯರ ಮಹತ್ವದ ಕೃತಿಗಳು ಬೆಳಕಿಗೆ ಬರುವುದಕ್ಕೆ ಸ್ತ್ರೀವಾದವಷ್ಟೇ ಅಲ್ಲದೇ ಮನುಕುಲದ ಚಿಂತನೆಗಳೂ ಗಟ್ಟಿಗೊಳ್ಳುವದಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘ ವೇದಿಕೆ ಸೃಷ್ಟಿಸಿತು. ಇಂಥ ವೇದಿಕೆಗೆ ಗಟ್ಟಿತನ ತಂದುಕೊಟ್ಟ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಗೌರವಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ಮುಂದಿನ ದಿನಗಳಲ್ಲಿ ಈ ಮಹಿಳಾ ಗ್ರಂಥ ಬಹುಮಾನ ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರತಿಷ್ಠಿತ ಬಹುಮಾನವಾಗುವಂತೆ ಮಾಡುವದು ಸಂಘದ ಸದಾಶಯವಾಗಿದೆ.