ವಿಜಯಪುರ: ಕೇಂದ್ರ ಸಚಿವ ರಮೇಶ ಜಿಗಜಿಣಗಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ: ನ್ಯಾಯವಾದಿ ಶ್ರೀನಾಥ ಪೂಜಾರಿ ಆರೋಪ

ಲೋಕದರ್ಶನ ವರದಿ

ವಿಜಯಪುರ 04: ವಿಜಯಪುರ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿರುವ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರು ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ, ಬದಲಾಗಿ ಕೇವಲ ರಾಜಕೀಯ ಮಾಡುತ್ತ ವ್ಯರ್ಥ ಕಾಲಹರಣ ಮಾಡಿದ್ದಾರೆ ಎಂದು ವಿಜಯಪುರ ಲೋಕಸಭಾ ಕ್ಷೇತ್ರದಿಂದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ  ಕಣಕ್ಕಿಳಿಯಲಿರುವ ಯುವ ಹೋರಾಟಗಾರ, ನ್ಯಾಯವಾದಿ ಶ್ರೀನಾಥ ಪೂಜಾರಿ ಆರೋಪಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಹತ್ತು ವರ್ಷಗಳ ಅವಧಿಯಲ್ಲಿ ಅವಧಿಯಲ್ಲಿ ಸಚಿವ ಜಿಗಜಿಣಗಿ ಅವರು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಬಹುದಾಗಿತ್ತು. ಆದರೆ ಏನೂ ಮಾಡಿಲ್ಲ. ಹೀಗಾಗಿಯೇ ಅವರು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳುತ್ತಿಲ್ಲ. ಬದಲಾಗಿ ಓರ್ವ ವ್ಯಕ್ತಿಯ ಹೆಸರು ಹೇಳಿಕೊಂಡು ಮತ ಕೇಳುವಂತಾಗಿದೆ ಎಂದು ಟೀಕಿಸಿದರು.

   ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಉದ್ಯೋಗವಿಲ್ಲದೇ ಜಿಲ್ಲೆಯ ಜನತೆ ಗುಳೇ ಹೋಗುವುದು ತಪ್ಪಿಲ್ಲ. ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಯ ಮೂಲಕ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಬಹುದಾಗಿತ್ತು. ಆದರೆ ಏನೂ ಮಾಡಿಲ್ಲ ಎಂದು ದೂರಿದರು.

ಬಿಜೆಪಿ ಹಾಗೂ ಕಾಂಗ್ರೆಸ್ನ ದುರಾಡಳಿತದಿಂದ ದೇಶದ ಜನತೆ ಬೇಸರಗೊಂಡಿದ್ದಾರೆ. ಅಹಿಂದ ವರ್ಗದ ಆದಿಯಾಗಿ ಎಲ್ಲರ ಕಲ್ಯಾಣ ಬಯಸುವ ಏಕೈಕ ಪಕ್ಷ ಬಹುಜನ ಸಮಾಜ ಪಕ್ಷ. ಸಂವಿಧಾನದ ಆಶಯಗಳನ್ನು ಜಾರಿಗೆ ತರಲು ಪಕ್ಷದ ಅಧಿನಾಯಕಿ ಮಾಯಾವತಿ ಅವರು ಈ ದೇಶದ ಪ್ರಧಾನಿಯಾಗಬೇಕಾಗಿದೆ ಎಂದರು. 

ನಾನು ಇದೇ ದಿ. 4 ರಂದು ಬಿಎಸ್ಪಿಅಭ್ಯರ್ಥಿಯಾಗಿ  ನಾಮಪತ್ರ ಸಲ್ಲಿಸಲಿದ್ದೇನೆ. ಅಂದು ಬೆಳಿಗ್ಗೆ 10 ಗಂಟೆಗೆ ಸಿದ್ಧೇಶ್ವರ ದೇವಸ್ಥಾನದಿಂದ ಬೃಹತ್ ಮೆರವಣಿಗೆಯೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದು, ಈ ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ  ದಸ್ತಗೀರ ಮುಲ್ಲಾ ಮಾತನಾಡಿ, ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲೂ ಬಿಎಸ್ಪಿ ತನ್ನಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಚಾಮರಾಜನಗರ, ಚಿಕ್ಕಬಳ್ಳಾಪೂರ, ಬೀದರ ಹಾಗೂ ವಿಜಯಪುರ ಲೋಕಸಭಾ ಕ್ಷೇತ್ರಗಳಲ್ಲಿ ಬಿಎಸ್ಪಿಅಭ್ಯರ್ಥಿಗಳು ನಿಶ್ಚಿತವಾಗಿ ಗೆಲ್ಲುತ್ತಾರೆ ಎಂದರು.

ಬಿಎಸ್ಪಿ ಮುಖಂಡ ಸದಾಶಿವ ಕುಬಕಡ್ಡಿ, ರಾಜು ಗುಬ್ಬೇವಾಡ, ಯಶವಂತ ಪೂಜಾರಿ, ಕಾಮಣ್ಣ ಗಂಗನಹಳ್ಳಿ ಹಾಗು ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.