ಲೋಕದರ್ಶನ ವರದಿ
ತಾಳಿಕೋಟಿ 18: ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿಯಿಂದ ಹಾಳಾದ ರಸ್ತೆಗಳಿಂದ ಎಲ್ಲಿಂದರಲ್ಲಿ ಧೂಳೇ ಧೂಳು ಕಾಣುತ್ತಿತ್ತು ಈ ಧೂಳಿನಿಂದ ಸಾರ್ವಜನಿಕರ ನೆಮ್ಮದಿ ಹಾಳಾಗಿ ಹೋಗಿತ್ತು ಆದರೀಗ ಪುರಸಭೆಯ ಆಡಳತವು ಇದರ ತಾತ್ಕಾಲಿಕ ಪರಿಹಾರಕ್ಕಾಗಿ ಟ್ಯಾಂಕರ ಮೂಲಕ ರಸ್ತೆಗಳಿಗೆ ನೀರು ಸಿಂಪಡಿಸುತ್ತಿರುವದರಿಂದ ಜನರು ಸ್ವಲ್ಪು ಮಟ್ಟಿಗೆ ನಿಟ್ಟಿಸಿರು ಬಿಡುವಂತಾಗಿದೆ.
ಹಾಳಾಗಿ ಹೋದ ರಸ್ತೆಗಳಿಂದ ಇಡೀ ಪಟ್ಟಣ ಧೂಳುಮಯವಾಗಿ ಹೋಗಿತ್ತು. ಜನರ ಆರೋಗ್ಯದ ಮೇಲೆ ಇದು ತೀವ್ರ ಪ್ರತಿಕೂಲ ಪರಿಣಾಮವನ್ನು ಬೀರುತ್ತಿತ್ತು. ಪಟ್ಟಣದ ಪ್ರಮುಖ ಮಾರುಕಟ್ಟೆ ರಸ್ತೆಗಳಲ್ಲಿ ದಿನನಿತ್ಯ ಓಡಾಡುವ ಸಾವಿರಾರು ವಾಹನಗಳಿಂದ ಧೂಳು ಮೇಲೆದ್ದು ರಸ್ತೆಯ ಅಕ್ಕ-ಪಕ್ಕದಲ್ಲಿರುವ ಅಂಗಡಿಗಳು ಧೂಳಿನಿಂದ ಆವೃತಗೊಂಡಿದ್ದವು. ವ್ಯಾಪಾರಸ್ಥರಿಗೆ ತಮ್ಮ ವ್ಯಾಪಾರಕ್ಕಿಂತಲೂ ಧೂಳು ಸ್ವಚ್ಛಗೊಳಿಸುವುದೇ ನಿತ್ಯದ ಕಾಯಕವಾಗಿತ್ತು. ಎಲ್ಲರ ಬಾಯಿಯಿಂದ ಬರುವ ಮಾತು ಒಂದೇ ಯಾವಾಗಪ್ಪ ನಮಗೆ ಈ ಧೂಳಿನಿಂದ ಮುಕ್ತಿ ಎಂದು.
ಕೊನೆಗೂ ಎಚ್ಚೆತ್ತ ಪುರಸಭೆ ಇದರ ತಾತ್ಕಾಲಿಕ ಪರಿಹಾರಕ್ಕಾಗಿ ಟ್ಯಾಂಕರ ಮೂಲಕ ದಿನಕ್ಕೆ ಎರಡು ಬಾರಿ ಪಟ್ಟಣದ ಪ್ರಮುಖ ರಸ್ತೆಗಳಿಗೆ ಟ್ಯಾಂಕರ ಮೂಲಕ ನೀರು ಸಿಂಪಡಿಸುತ್ತಿದೆ.
ಈ ಕಾರ್ಯವನ್ನು ಬಹಳ ವ್ಯವಸ್ಥಿತವಾಗಿ ನಿರ್ವಹಿಸುತ್ತಿರುವ ಆರೋಗ್ಯ ವಿಭಾಗದ ಸಹಾಯಕ ಎಸ್.ಎ. ಗತ್ತರಗಿ ಕಡಿಮೆ ಸಂಖ್ಯೆಯಲ್ಲಿರುವ ಪೌರಕಾರ್ಮಿಕರನ್ನೇ ಬಳಸಿಕೊಂಡು ಇಡೀ ನಗರವನ್ನು ನಿರ್ಮಲವಾಗಿರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ ಇದು ನಿಜಕ್ಕೂ ಪ್ರಶೋಂಶನಿಯವಾದ ಕಾರ್ಯವಾಗಿದೆ.
ಆದರೆ ಪಟ್ಟಣ ಶಾಶ್ವತವಾಗಿ ಧೂಳಿನಿಂದ ಮುಕ್ತವಾಗಬೇಕಾದರೆ ಇಷ್ಟು ಮಾತ್ರ ಮಾಡಿದರೆ ಸಾಲದು ಹಾಳಾಗಿ ಹೋದ ರಸ್ತೆಗಳನ್ನು ಆದಷ್ಟು ಬೇಗ ದುರಸ್ತಿಗೊಳಿಸುವ ಕಾರ್ಯ ಆರಂಭಿಸಬೇಕಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.