ಲೋಕದರ್ಶನ ವರದಿ
ಕಂಪ್ಲಿ 20: ತಾಲೂಕಿನ ಹಳೇ ಚಿನ್ನಾಪುರದಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಗಾಳಿ ಸಹಿತ ಮಳೆಯಿಂದಾಗಿ ಆಂಜನೇಯ ದೇವಸ್ಥಾನ ಬಳಿಯ ಬೃಹತ್ ಅರಳಿ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ 4 ಮನೆಗಳು ಹಾನಿಗೊಳಗಾಗಿವೆ.
ಕೊಂಬೆ ಬಿದ್ದ ರಭಸಕ್ಕೆ ಆಶ್ರಯ ಯೋಜನೆಯಡಿ ನಿರ್ಮಾಣವಾದ ಪೀರಾವಲಿ, ಖಾಸೀಂಸಾಬ್, ಶೇಕ್ಷಾವಲಿ, ಟಿ.ನಾರಾಯಣಗೆ ಸೇರಿದ ಮನೆಗಳು ಸಂಪೂರ್ಣ ಜಖಂಗೊಂಡಿದ್ದು, ಮನೆಯಲ್ಲಿನ ಸಾಮಗ್ರಿಗಳಿಗೆ ಹಾನಿಯಾಗಿದೆ. ಘಟನೆ ವೇಳೆ ಮನೆಯಲ್ಲಿದ್ದ ಖಾಸೀಂ ಸಾಬ್ ಪುತ್ರಿ ರಜಿಯಾ ಬೇಗಂ ಬಾಲಕಿ ತಲೆಗೆ ಪೆಟ್ಟು ಬಿದ್ದಿದೆ. ಖಾಸೀಂಸಾಬ್ಗೆ ಫ್ಯಾನ್ ರೆಕ್ಕೆಗಳು ತಗುಲಿ ಸಣ್ಣ ಪುಟ್ಟ ಗಾಯಗಳಾಗಿವೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಹೊಸಪೇಟೆಯ ತಾಪಂ ಇಒ ಟಿ.ವೆಂಕೋಬಪ್ಪ ಮಾತನಾಡಿ, ಜಿಪಂ ಹಾಗೂ ಜಿಲ್ಲಾಧಿಕಾರಿಗೆ ಹಾನಿ ವರದಿ ಸಲ್ಲಿಸಲಾಗುವುದು. ಗ್ರಾಪಂಯಿಂದ ಹಾನಿಗೊಳಗಾದ ಮನೆ ಮಾಲೀಕರಿಗೆ 1000 ರೂ. ತಾತ್ಕಾಲಿಕ ಪರಿಹಾರವಾಗಿ ನೀಡಲಾಗುವುದು. ರಾಜೀವ್ ಗಾಂಧಿ ವಸತಿ ನಿಗಮಕ್ಕೆ ವರದಿ ನೀಡಿ ಮನೆಗಳನ್ನು ನಿಮರ್ಿಸಿಕೊಡಲಾಗುವುದು ಎಂದರು.
ಘಟನೆಯಲ್ಲಿ ಗಾಯಗೊಂಡ ಬಾಲಕಿ ರಜಿಯಾ ಬೇಗಂಗೆ ಪ್ರಾಥಮಿಕ ಚಿಕಿತ್ಸೆಗಾಗಿ 500 ರೂ. ನೀಡಿದರು. ಸಂತ್ರಸ್ತರಿಗೆ ಗ್ರಾಮದ ಸಕಿಪ್ರಾ ಶಾಲೆಗೆ ತೆರಳಿ ಪರಿಶೀಲಿಸಿ ಊಟ, ವಸತಿ ಕಲ್ಪಿಸಿಕೊಡುವ ತಾತ್ಕಾಲಿಕ ವ್ಯವಸ್ಥೆ ಮಾಡಿದರು. ಉಪತಹಸೀಲ್ದಾರ್ ಬಿ.ರವೀಂದ್ರಕುಮಾರ್, ತಾಪಂ ಸದಸ್ಯ ಸಿ.ಡಿ.ಮಹಾದೇವ ಇದ್ದರು